ಸಿನಿವಾಣಿ

ಅಮಲಾ ಇನ್ನು ನಾರಪ್ಪನ ರಾಣಿ

ಕಿಚ್ಚ ಸುದೀಪ್​ಗೆ ಜತೆಯಾಗಿ ‘ಹೆಬ್ಬುಲಿ’ ಚಿತ್ರದಲ್ಲಿ ಅಭಿನಯಿಸಿದ್ದ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ ಅಮಲಾ ಪೌಲ್ ಈ ವರ್ಷ ನಾಲ್ಕೈದು ಸಿನಿಮಾಗಳಲ್ಲಿ ಬಿಜಿ. ಈ ಮಧ್ಯೆ ಅವರು ತೆಲುಗಿನಲ್ಲಿ ನಟ ವೆಂಕಟೇಶ್ ದಗ್ಗುಬಾಟಿಯ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ತಮಿಳು ನಟ ಧನುಷ್ ಅಭಿನಯದ, ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿರುವ

‘ಅಸುರನ್’ ಚಿತ್ರ ತೆಲುಗಿಗೆ ‘ನಾರಪ್ಪ’ ಹೆಸರಿನಲ್ಲಿ ರಿಮೇಕ್ ಆಗುತ್ತಿದ್ದು, ಆ ಚಿತ್ರದಲ್ಲಿ ನಾಯಕನಾಗಿ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಮಾಡಲಾದ ‘ನಾರಪ್ಪ’ ಫಸ್ಟ್​ಲುಕ್​ನಲ್ಲಿ ವೆಂಕಟೇಶ್ ಖಡಕ್ ಲುಕ್​ನಲ್ಲಿ ಮಿಂಚಿದ್ದರು. ಇದು ಟಾಲಿವುಡ್ ಸಿನಿಪ್ರಿಯರ ಅಪಾರ ಮೆಚ್ಚುಗೆ ಕೂಡ ಗಳಿಸಿತ್ತು. ಇದೀಗ ‘ನಾರಪ್ಪ’ ಚಿತ್ರತಂಡಕ್ಕೆ ನಟಿ ಅಮಲಾ ಪೌಲ್ ಎಂಟ್ರಿ ಕೊಟ್ಟಿದ್ದಾರೆ. ‘ಅಸುರನ್’ ಚಿತ್ರದಲ್ಲಿ ನಟಿ ಮಂಜು ವಾರಿಯರ್ ಮಾಡಿದ್ದ ಪಾತ್ರವನ್ನು ‘ನಾರಪ್ಪ’ ಚಿತ್ರದಲ್ಲಿ

ಅಮಲಾ ಪೌಲ್ ಮಾಡಲಿದ್ದಾರೆ. ಸುರೇಶ್ ಪ್ರೊಡಕ್ಷನ್​ನ, ಶ್ರೀಕಾಂತ್ ಅಡ್ಡಾಲ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಸದ್ಯ ಅನಂತಪುರ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದೊಂದು ಹಳ್ಳಿಯ ಕಥೆ ಆಧಾರಿತ ಚಿತ್ರ. ನಟಿ ಅಮಲಾ ಪೌಲ್ ಸದ್ಯ ತಮಿಳಿನ ‘ಅಧೋ ಅಂಧಾ ಪರವೈ ಪೋಲ’, ಮಲಯಾಳಂ ಭಾಷೆಯ ‘ಆದುಜೀವಿತಂ’, ತೆಲುಗಿನ ‘ಲಸ್ಟ್ ಸ್ಟೋರೀಸ್’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. -ಏಜೆನ್ಸೀಸ್