ಬೆಂಗಳೂರು: 'ಆಲ್ಫಾ' ಎಂದರೆ ಗ್ರೀಕ್ ಭಾಷೆಯಲ್ಲಿ ನಂಬರ್ ಒನ್ ಅಂತ. ಈಗ ಅದೇ ಹೆಸರಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಒಂದು ಚಿತ್ರ ನಿರ್ಮಾಣವಾಗಿದೆ. ಚಿರಂತ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರವು ಈಗಾಗಲೇ ಮುಕ್ತಾಯವಾಗಿದ್ದು, ಸೆಪ್ಟೆಂಬರ್ನಲ್ಲಿ ತೆರೆಗೆ ಬರಲಿದೆ.
ಶ್ರೀ ಧರ್ಮಶಾಸ್ತ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಆಲ್ಫಾ', ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರಕ್ಕೆ ಬೆಂಗಳೂರು, ಹಾಸನ, ಸಕಲೇಶಪುರ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರದ ಮೊದಲ ಪ್ರತಿ ಸಿದ್ದವಾಗಲಿದೆ.
ಮೂಲತಃ ಬಾಕ್ಸರ್ ಆಗಿರುವ ಚಿರಂತ್ ಅವರಿಗೆ 'ಆಲ್ಫಾ' ಚೊಚ್ಚಲ ಚಿತ್ರ. ನಾಯಕನಾಗಿ ಕಾಣಿಸಿಕೊಂಡಿರುವ ಚಿರಂತ್ ಈ ಚಿತ್ರದ ನಿರ್ದೇಶಕರೂ ಹೌದು. ಕಥೆ-ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಸಿಂಧೂಜ ಈ ಚಿತ್ರದ ನಾಯಕಿ. ಜಗದೀಶ್ ಹಾಗೂ ರವಿಚಂದ್ರ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.
'ಆಲ್ಫಾ' ಚಿತ್ರಕ್ಕೆ ಅಜ್ಮಲ್ ಖಾನ್ ಛಾಯಾಗ್ರಹಣ ಹಾಗೂ ವಿನ್ಸನ್ ಅಭಿಷೇಕ್ ಸಂಗೀತವಿದೆ. 'ಕೌರವ' ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.