ಸಿನಿವಾಣಿ

ಮುಂಜಾನೆ 3 ಗಂಟೆವರೆಗೂ ದೇಗುಲದಲ್ಲಿ ಹಾಡಿನ ಸದ್ದು ; Hyderabad ಪೊಲೀಸರಿಗೆ ನಟ ಅಲ್ಲು ಸಿರೀಶ್ ದೂರು

  • ಮುಂಜಾನೆ 3ರವರೆಗೂ ಡಿಜೆ ಶಬ್ಧ ಹೈದರಾಬಾದ್ ಪೊಲೀಸರಿಗೆ ದೂರು ಕೊಟ್ಟ ನಟ

  • ನಾನು ಹನುಮಾನ್​ ಭಕ್ತ, ಆದರೆ ಡಿಜೆ ಹಾಡು ಹಾಕೋದು ಭಕ್ತಿಯಲ್ಲ ಎಂದ ಅಲ್ಲು ಸಿರೀಶ್

  • ಭಕ್ತಿ ವಿರುದ್ಧ ದೂರು ಕೊಟ್ಟಿಲ್ಲ ನಾಗರಿಕ ಪ್ರಜ್ಞೆ ವಿಚಾರವಾಗಿ ದೂರು ನೀಡಿದ್ದೇನೆ ಎಂದ ನಟ

Allu Sirish: 'ನಾನು ಸಹ ಹನುಮಂತನ ಭಕ್ತನೇ ಹೌದು. ಆದರೆ, ರಾತ್ರಿ 2 ಗಂಟೆಗೆ ಡಿಜೆ ಹಾಕಿ ಮತ್ತೊಬ್ಬರಿಗೆ ಸಮಸ್ಯೆಯುಂಟು ಮಾಡುವುದು ಭಕ್ತಿಯಲ್ಲ. ನಾನು ದೂರು ನೀಡಿರುವುದು ಭಕ್ತಿಯ ವಿರುದ್ಧವಲ್ಲ' ಹೀಗೆಂದು ಎಕ್ಸ್​ನಲ್ಲಿ ಬರೆದುಕೊಂಡಿರುವುದು ಸ್ಟಾರ್​​ ಟಾಲಿವುಡ್​ ನಟ ಅಲ್ಲು ಸಿರೀಶ್.

ತೆಲುಗು ಸಿನಿಮಾರಂಗದ ನಟ ಅಲ್ಲು ಸಿರೀಶ್​ ಅವರು ದೇವಸ್ಥಾನದಲ್ಲಿ ಸಂಜೆಯಿಂದ, ಮುಂಜಾನೆಯವರೆಗೂ ಹಾಕುವ ಹಾಡಿನಿಂದ ತಮ್ಮ ಅಪಾರ್ಟ್​​ಮೆಂಟ್ ಹಾಗೂ ಸುತ್ತಮುತ್ತಲಿನ ಜನರಿಗಾಗುತ್ತಿರುವ ಸಮಸ್ಯೆ ಬಗ್ಗೆ ಹೈದರಾಬಾದ್​ ಪೊಲೀಸರಿಗೆ ದೂರು ಕೊಟ್ಟಿದ್ದಾರೆ

ಅಲ್ಲು ಸಿರೀಶ್​ ದೂರಿನಲ್ಲಿ ಏನಿದೆ?

'ನಾನು ಶೇಕ್​ಪೇಟ್​ನ ಅಪರ್ಣಾ ಒನ್​ ಸೊಸೈಟಿಯ ನಿವಾಸಿ. ಇಲ್ಲಿಂದ ಕೊಂಚ ದೂರ ವಿನೋಭ ನಗರವಿದೆ. ಇಲ್ಲೊಂದು ಹನುಮಂತನ ದೇಗುಲವಿದೆ. ಗಣೇಶ ಹಬ್ಬ ಮುಗಿದ ನಂತರವೂ ಸಹ ಇಲ್ಲಿ ಬೆಳಗಿನ ಜಾವ 2 ರಿಂದ 3 ಗಂಟೆಯವರೆಗೆ ಹಾಡುಗಳನ್ನು ಹಾಕಲಾಗುತ್ತಿದೆ. ಈ ಬಗ್ಗೆ ಈ ಹಿಂದೆ ಫಿಲ್ಮ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

'ಗಣೇಶ ವಿಸರ್ಜನೆ ಇರುವುದರಿಂದ ಸೆಪ್ಟೆಂಬರ್ 25 ರವರೆಗೆ ಸಹಕರಿಸುವಂತೆ ಅವರು ಕೋರಿದ್ದರು. ಹಬ್ಬ ಮುಗಿದಿದ್ದರೂ ಸಹ ಶಬ್ಧಮಾಲಿನ್ಯ ನಿಂತಿಲ್ಲ. ನಮ್ಮ ಅಪಾರ್ಟ್​ಮೆಂಟ್​​ನಲ್ಲಿ ಹಾಗೂ ಸುತ್ತಮುತ್ತಲು ಅನೇಕ ಹಿರಿಯರು, ಮಕ್ಕಳು ಮತ್ತು ಕೆಲಸ ಮಾಡುವ ವೃತ್ತಿಪರರು ಇದರಿಂದ ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ದೂರು ಸಹ ಕೊಟ್ಟಿದ್ದಾರೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ನಾನು ಸಹ ಹನುಮಾನ್​ ಭಕ್ತ

ಮತ್ತೊಂದು ಪೋಸ್ಟ್​ನಲ್ಲಿ 'ನಾನು ಸಹ ಧಾರ್ಮಿಕ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡವನು. ನಾನು ಹನುಮಂತನನ್ನು ಇಷ್ಟದ ದೇವರೆಂದು ಆರಾಧಿಸುತ್ತೇನೆ. ಆದರೆ, ಮುಂಜಾನೆ 2-3 ಗಂಟೆವರೆಗೂ DJ ಸೆಟ್‌ ಹಾಕಿ ಜೋರಾಗಿ ಹಾಡು ಹಾಕುವುದು ಭಕ್ತಿಯಲ್ಲ'. ಮುಂದುವರೆದು, 'ನಾನು ನಿಮ್ಮ ಭಕ್ತಿ ವಿರುದ್ಧ ದೂರು ಕೊಟ್ಟಿಲ್ಲ. ಸಿವಿಕ್ ಸೆನ್ಸ್​ ವಿಚಾರವಾಗಿ ದೂರು ಕೊಟ್ಟಿದ್ದೇನೆ. ನನ್ನ ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ಎಕ್ಸ್​​ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ಹೈದರಾಬಾದ್​ ಪೊಲೀಸರು ಅಲ್ಲು ಸಿರೀಶ್​ ಅವರ ದೂರಿಗೆ ಪ್ರತಿಕ್ರಿಯೆ ಕೊಟ್ಟಿದ್ದು, 'ಸರ್ ಈ ವಿಚಾರವಾಗಿ ನಾವು ಫಿಲ್ಮ್​ ನಗರ ಠಾಣೆಯ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ' ಎಂದು ಹೇಳಿದ್ದಾರೆ. ಪೊಲೀಸರ ಈ ತಕ್ಷಣ ಪ್ರತಿಕ್ರಿಯೆಗೆ ಅಲ್ಲು ಸಿರೀಶ್ ಧನ್ಯವಾದ ತಿಳಿಸಿದ್ದಾರೆ, (ಏಜೆನ್ಸೀಸ್).