ಸಿನಿವಾಣಿ

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್​ ಮಗಳು ...

ಹೈದರಾಬಾದ್​: ಅಲ್ಲು ಅರ್ಜುನ್​ ಇಲ್ಲಿಯವರೆಗೂ ತಮ್ಮ ಹೊಸ ಚಿತ್ರಗಳ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿಯನ್ನು ಕೊಡುತ್ತಲೇ ಇದ್ದರು. ಈ ಬಾರಿ, ಸಹ ಅವರೊಂದು ವಿಷಯವನ್ನು ಹೇಳಿಕೊಂಡಿದ್ದಾರೆ. ಆದರೆ, ಈ ಬಾರಿ ಅವರು ನಟಿಸುತ್ತಿರುವ ಬಗ್ಗೆ ಅಲ್ಲ, ಮಗಳು ಅರ್ಹ ನಟಿಸುತ್ತಿರುವ ಖುಷಿಯನ್ನು ಅವರು ಹಂಚಿಕೊಂಡಿದ್ದಾರೆ.

ಹೌದು, ಅಲ್ಲು ಅರ್ಜುನ್​ ಅವರ ಮುದ್ದಿನ ಮಗಳು ಅರ್ಹ ಇದೀಗ ಬಣ್ಣ ಹಚ್ಚುವುದಕ್ಕೆ ಸಿದ್ಧಳಾಗಿದ್ದಾಳೆ. ಈ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನವಳಾಗಿದ್ದಾಳೆ. ಅರ್ಜುನ್​ ತಾತ ಅಲ್ಲು ರಾಮಲಿಂಗಯ್ಯ ನಟರಾಗಿ ದೊಡ್ಡ ಹೆಸರು ಮಾಡಿದವರು. ತಂದೆ ಅಲ್ಲು ಅರವಿಂದ್​ ದೊಡ್ಡ ನಿರ್ಮಾಪಕರು. ಇನ್ನು ಅರ್ಜುನ್​ ಅಲ್ಲದೆ ಅವರ ಸಹೋದರ ಶಿರೀಷ್​ ಹೀರೋಗಳಾಗಿ ಗುರುತಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಅವರ ಮಗಳು ಅರ್ಹ ಸಹ ಚಿತ್ರರಂಗಕ್ಕೆ ಬಂದಿರುವುದು ವಿಶೇಷ.

ಅರ್ಜುನ್​ ಮಗಳು ಅರ್ಹ, ಇದೀಗ ಸಮಂತಾ ಅಭಿನಯದ 'ಶಾಕುಂತಲಂ' ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಈ ಚಿತ್ರದಲ್ಲಿ ಅರ್ಹಗೆ ರಾಜಕುಮಾರ ಭರತನ ಪಾತ್ರವಂತೆ. ಇದಕ್ಕೂ ಮುನ್ನ ಅರ್ಜುನ್​ ಮತ್ತು ಸಮಂತಾ, 'ಸನ್​ ಆಫ್​ ಸತ್ಯಮೂರ್ತಿ' ಮತ್ತು 'ದಿ ಪರ್ಫೆಕ್ಟ್​ ಜಂಟಲ್​ಮ್ಯಾನ್​' ಚಿತ್ರಗಳಲ್ಲಿ ನಟಿಸಿದ್ದರು. ಈಗ ಅರ್ಜುನ್​ ಮಗಳು ಸಮಂತಾ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

ಅಲ್ಲು ಕುಟುಂಬಕ್ಕೆ ಇದೊಂದು ಹೆಮ್ಮೆಯ ಕ್ಷಣ ಎಂದು ಹೇಳಿಕೊಂಡಿರುವ ಅರ್ಜುನ್​, ಅರ್ಹಗೆ ಅವಕಾಶ ಕೊಟ್ಟ ಗುಣಶೇಖರ್​ ಮುಂತಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಸಮಂತಾ ಮತ್ತು 'ಶಾಕುಂತಲಂ' ತಂಡಕ್ಕೆ ಶುಭ ಹಾರೈಸಿದ್ದಾರೆ.