ಸಿನಿವಾಣಿ

ಅಲ್ಲು ಅರ್ಜುನ್​, ರಶ್ಮಿಕಾ ಹೊಸ ಚಿತ್ರಕ್ಕೆ ಪುಷ್ಪ ಟೈಟಲ್​; ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿದ್ಧವಾಗ್ತಿದೆ ಈ ಸಿನಿಮಾ

ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್​ ಮತ್ತು ನಿರ್ದೇಶಕ ಸುಕುಮಾರ್​ ಕಾಂಬಿನೇಷನ್​ ಚಿತ್ರದ ಶೀರ್ಷಿಕೆ ಏನು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಅಂದರೆ, ಅಲ್ಲು ಅರ್ಜುನ್ ಬರ್ತಡೇ (ಏ. 8) ಪ್ರಯುಕ್ತ ಇಂದು ಮೈತ್ರಿ ಮೂವಿ ಮೇಕರ್ಸ್​ ಚಿತ್ರದ ಪೋಸ್ಟರ್​ ಬಿಡುಗಡೆ ಮಾಡಿದ್ದು, ಪುಷ್ಪ ಎಂಬ ಟೈಟಲ್​ ಅಂತಿಮವಾಗಿದೆ.
ಈಗಾಗಲೇ ಟಾಲಿವುಡ್​ ಸ್ಟಾರ್​ ನಟರೊಂದಿಗೆ ತೆರೆಹಂಚಿಕೊಳ್ಳುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ, ಈಗ ಅಲ್ಲು ಅರ್ಜುನ್​ ಜತೆಗೂ ನಟಿಸಲು ಸಿದ್ಧರಾಗಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ, ಈ ಸಿನಿಮಾ ಮೂಲ ತೆಲುಗಿನ ಜತೆಯಲ್ಲಿ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ತೆರೆಕಾಣಲಿದೆ. ಈಗಾಗಲೇ ಚಿತ್ರೀಕರಣ ಕೆಲಸಗಳು ಬಹುತೇಕ ಮುಗಿಯುವ ಹಂತದಲ್ಲಿದ್ದು, ಸದ್ಯ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬಾಕಿ ಉಳಿದ ಶೂಟಿಂಗ್​ಗೆ ಬ್ರೇಕ್​ ಹಾಕಲಾಗಿದೆ. ಲಾಕ್​ಡೌನ್​ ತೆರವಾಗುತ್ತಿದ್ದಂತೆ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಹಾಗಾದರೆ ಸಿನಿಮಾ ಕಥೆ ಏನು? ನೆಲ್ಲಮಾಲ ದಟ್ಟಾರಣ್ಯದಲ್ಲಿ ನಡೆಯುವ ಸ್ಮಗ್ಲಿಂಗ್​ ಹಿನ್ನೆಲೆಯನ್ನಿಟ್ಟುಕೊಂಡು ಚಿತ್ರಮೂಡಿಬರಲಿದ್ದು, ಸೈರಾ ಚಿತ್ರದ ಮೂಲಕ ಟಾಲಿವುಡ್​ಗೆ ಪ್ರವೇಶ ಪಡೆದಿದ್ದ ವಿಜಯ ಸೇತುಪತಿ ಪುಷ್ಪಾ ಚಿತ್ರದಲ್ಲಿ ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ದೇವಿ ಶ್ರೀ ಪ್ರಸಾದ್​ ಸಂಗೀತ ನಿರ್ದೇಶನದ ಹೊಣೆ ಹೊತ್ತಿದ್ದಾರೆ.