Allu Arjun ಚಿತ್ರ Instagram 
ಸಿನಿವಾಣಿ

ಟಾಲಿವುಡ್‌ನಲ್ಲಿ ಹದ್ದುಮೀರಿದ ಫ್ಯಾನ್ ವಾರ್: ಟ್ರೋಲ್ ಸಂಸ್ಕೃತಿ ವಿರುದ್ಧ ಧ್ವನಿ ಎತ್ತಿದ ನಟ ಅಲ್ಲು ಅರ್ಜುನ್ ! Allu Arjun

ಹೈದರಾಬಾದ್: ವಾರ್ಷಿಕ 'ಅಲ್ಲು ಅರ್ಜುನ್ ಫ್ಯಾನ್ ಅಸೋಸಿಯೇಷನ್' ಶೃಂಗಸಭೆಯಲ್ಲಿ ಭಾಗವಹಿಸಿದ ಅರ್ಜುನ್,(Allu Arjun) ಮಂಗಳವಾರ (ಜು.28) ಸಾವಿರಾರು ಅಭಿಮಾನಿಗಳನ್ನು ಭೇಟಿಯಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ತಮ್ಮ ಸಿಗ್ನೇಚರ್ ಕಪ್ಪು ಉಡುಪಿನಲ್ಲಿ ಮಿಂಚಿದ 'ರಾಕಾ' ನಟ, ಅಭಿಮಾನಿಗಳಿಗೆ ವರ್ಷಕ್ಕೊಂದು ಒಳ್ಳೆಯ ಕೆಲಸ ಮಾಡುವಂತೆ ಪ್ರೇರೇಪಿಸಿದ್ದಷ್ಟೇ ಅಲ್ಲದೆ, ತಮ್ಮ ಆಂಟಿ ಫ್ಯಾನ್ಸ್ ಹಾಗೂ ದ್ವೇಷಿಸುವವರಿಗೂ ವಿಶೇಷ ಸಂದೇಶ ರವಾನಿಸಿದ್ದಾರೆ.

ಟೀಕೆಗಳ ನಡುವೆಯೂ ಟ್ರೋಲ್ ಮಾಡಬೇಡಿ; ಅಲ್ಲು ಅರ್ಜುನ್​

ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅರ್ಜುನ್‌, "ಬಹಳ ದಿನಗಳಿಂದ ಹೇಳಬೇಕೆಂದಿದ್ದ ಮಾತೊಂದನ್ನು ಸೂಕ್ತ ಸಂದರ್ಭಕ್ಕಾಗಿ ಕಾಯ್ದು ಈಗ ನಿಮ್ಮ ಬಳಿ ಹೇಳುತ್ತಿದ್ದೇನೆ. ನಿಮಗೆ ಯಾರಾದರೂ ಇಷ್ಟವಾಗದಿದ್ದರೆ, ಅವರನ್ನು ದ್ವೇಷಿಸಿ ಮತ್ತು ಟ್ರೋಲ್‌ ಮಾಡಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ," ಎಂದು ಮನವಿ ಮಾಡಿದರು.
ನಿಮಗೆ ಅವರು ಇಷ್ಟವಾಗದಿದ್ದರೆ, ಹಾಗೆಯೇ ಬಿಟ್ಟುಬಿಡಿ. ನಿಮ್ಮ ಸಮಯದಲ್ಲಿ ಶೇ 1 ರಷ್ಟು ಕೂಡಾ ಅವರ ಮೇಲೆ ವ್ಯರ್ಥ ಮಾಡಬೇಡಿ. ನಿಮ್ಮ ಬಳಿ 100 ರೂ. ಇದ್ದರೆ, ನೀವು ಅದನ್ನು ನಿಮಗೆ ಇಷ್ಟವಿಲ್ಲದದ್ದಕ್ಕೆ ಖರ್ಚು ಮಾಡುತ್ತೀರಾ? ನಿಖರವಾಗಿ ಹೇಳುವುದಾದರೆ, ಖರ್ಚು ಮಾಡಬೇಡಿ. ನಿಮಗೆ ಇಷ್ಟವಾದದ್ದನ್ನು ಮಾಡಲು ಸಮಯ ಕಳೆಯಿರಿ. ಬದಲಾಗಿ ನೀವು ಇಷ್ಟಪಡುವ ಹುಡುಗಿಯ ಮನೆಯ ಮುಂದೆ ಕಾಯಿರಿ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ನಂತರ, ಅರ್ಜುನ್ ತಮ್ಮ ಅಭಿಮಾನಿಗಳೊಂದಿಗೆ ಫೋಟೋವೊಂದನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನನ್ನ ಪ್ರೀತಿಯ ಅಭಿಮಾನಿಗಳೇ ಈ ಕಾರ್ಯಕ್ರಮಕ್ಕಾಗಿ ನೀವೆಲ್ಲರೂ ವಿವಿಧ ಸ್ಥಳಗಳಿಂದ ಬಂದಿರುವುದನ್ನು ನೋಡುವುದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ನಿಮ್ಮೆಲ್ಲರಿಗೂ ಪ್ರೀತಿಯ ಧನ್ಯವಾದಗಳು ಎಂದು ಬರೆದಿದ್ದಾರೆ.

ಟಾಲಿವುಡ್‌ನಲ್ಲಿ ಹೆಚ್ಚಿದ ಫ್ಯಾನ್ ವಾರ್ ಕಿರಿಕ್!

ತೆಲುಗು ಚಿತ್ರರಂಗ ಸ್ಟಾರ್ ನಟರ ಅಭಿಮಾನಿಗಳ ನಡುವಿನ ವಾಕ್ಸಮರ ಹಾಗೂ 'ಫ್ಯಾನ್ ವಾರ್' ದಿನದಿಂದ ದಿನಕ್ಕೆ ಅತಿರೇಕಕ್ಕೆ ಹೋಗುತ್ತಿದ್ದು, ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಹಾಗೂ ಆನ್‌ಲೈನ್ ಸ್ಪೇಸ್‌ಗಳಲ್ಲಿ ಅಭಿಮಾನಿಗಳು ಬಳಸುವ ಭಾಷೆ ಸಭ್ಯತೆಯ ಗೆರೆ ದಾಟುತ್ತಿದೆ. ತಮ್ಮ ನೆಚ್ಚಿನ ನಟನನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುವ ಭರದಲ್ಲಿ, ಎದುರಾಳಿ ನಟರನ್ನು ಹೀಯಾಳಿಸುವುದು ಮತ್ತು ಅವರ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕುವುದು ಹೆಚ್ಚಾಗುತ್ತಿದೆ. ಈ ಕಿತ್ತಾಟದಲ್ಲಿ ಮಹಿಳೆಯರು, ಮಕ್ಕಳು ಹಾಗೂ ಕುಟುಂಬದವರನ್ನೂ ಎಳೆದು ತಂದು ಅಸಭ್ಯವಾಗಿ ನಿಂದಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಹೆಚ್ಚಾಗುತ್ತಿದೆ 'ಆಂಟಿ-ಫ್ಯಾನ್' ಸಂಸ್ಕೃತಿ!

ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ 'ಆಂಟಿ-ಫ್ಯಾನ್' ಸಂಸ್ಕೃತಿ ವಿಪರೀತವಾಗಿ ಬೆಳೆದಿದ್ದು, ನಿರ್ದಿಷ್ಟ ನಟನ ಸಿನಿಮಾಗಳು ಅಥವಾ ಚಟುವಟಿಕೆಗಳನ್ನು ಕೇವಲ ಟ್ರೋಲ್ ಮಾಡುವ ಉದ್ದೇಶದಿಂದಲೇ ಗಮನಿಸುವ ಒಂದು ಗುಂಪು ಸೃಷ್ಟಿಯಾಗಿದೆ. ಕೇವಲ ಟೀಕೆಗೆಷ್ಟೇ ಸೀಮಿತವಾಗಿದ್ದ ಈ ಧೋರಣೆ, ಈಗ ಬೆದರಿಕೆ ಹಾಕುವುದು ಹಾಗೂ ಎಡಿಟ್ ಮಾಡಿದ ವಿಕೃತ ಫೋಟೋಗಳನ್ನು ಹಂಚಿಕೊಳ್ಳುವ ಹಂತಕ್ಕೆ ತಲುಪಿದೆ.

ನಟರ ಮೌನಕ್ಕೆ ವಿರೋಧ

ಅಭಿಮಾನಿಗಳಿಂದ ಸಿಗುವ ಅಪಾರ ಜನಪ್ರಿಯತೆ ಮತ್ತು ಪ್ರೀತಿಯನ್ನು ಸ್ವೀಕರಿಸುವ ನಟರು, ಅದೇ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಅಸಭ್ಯವಾಗಿ ವರ್ತಿಸಿದಾಗ ಅವರನ್ನು ನಿಯಂತ್ರಿಸಲು ಮುಂದಾಗುತ್ತಿಲ್ಲ ಎಂಬ ವಿಮರ್ಶೆಯೂ ಕೇಳಿಬರುತ್ತಿದೆ. ಸ್ವತಃ ನಟ ಅಲ್ಲು ಅರ್ಜುನ್ ಕೂಡ ಈ ಹಿಂದೆ ಪವನ್ ಕಲ್ಯಾಣ್ ಅವರ ಕೆಲವು ಅಭಿಮಾನಿಗಳಿಂದ ತೀವ್ರ ರೀತಿಯ ಆನ್‌ಲೈನ್ ಟ್ರೋಲಿಂಗ್ ಎದುರಿಸಿದ್ದರು.
ಸುಕುಮಾರ್ ನಿರ್ದೇಶನದ 'ಪುಷ್ಟ: ದಿ ರೈಸ್' ಮತ್ತು 'ಪುಷ್ಪ 2: ದಿ ರೂಲ್' ಸಿನಿಮಾಗಳ ಅಭೂತಪೂರ್ವ ಯಶಸ್ಸಿನ ಬಳಿಕ, ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ಬೃಹತ್ ಬಜೆಟ್‌ನ 'ರಾಕಾ' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ, ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬರಲಿರುವ 'AA23' ಚಿತ್ರದಲ್ಲೂ ಅಲ್ಲು ಅರ್ಜುನ್ ಅಭಿನಯಿಸಲಿದ್ದಾರೆ (ಏಜೆನ್ಸೀಸ್​).