ಸಿನಿವಾಣಿ

ಐ ಆ್ಯಮ್ ಸೋ ಪ್ರೌಡ್ ಆಫ್​ ಯೂ ... ಸೋನಾಕ್ಷಿ ಬೆನ್ನು ತಟ್ಟಿದ ಆಲಿಯಾ ಭಟ್

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕಳೆದ ಆರು ತಿಂಗಳಿನಿಂದ ಟ್ರೋಲ್ ಆಗಿ ಸುಸ್ತಾಗಿ ಬಿಟ್ಟಿದ್ದಾರೆ. ಅದಕ್ಕೆ ಕಾರಣ, ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ ರಾಮಾಯಣದ ಪ್ರಶ್ನೆಯೊಂದಕ್ಕೆ ಉತ್ತರಿಸುವುದಕ್ಕೆ ಅವರು ತಡಕಾಡಿದ್ದು. ಈ ವಿಷಯವನ್ನಿಟ್ಟುಕೊಂಡು, ಜನ ಅವರನ್ನು ವಿಪರೀತ ಟ್ರೋಲ್ ಮಾಡುತ್ತಿದ್ದು, ಇದನ್ನು ನೋಡಿ ಸೋನಾಕ್ಷಿ ಸುಸ್ತಾಗಿದ್ದಾರೆ.

ಈ ಮಧ್ಯೆ, ಸೋನಾಕ್ಷಿ ಮಾಡಿದ ಒಂದು ಕೆಲಸಕ್ಕೆ ಅವರಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆಲಿಯಾ ಭಟ್ ಸಹ, ಸೋನಾಕ್ಷಿ ಕೆಲಸವನ್ನು ಮೆಚ್ಚಿಕೊಂಡು, ‘ಐ ಆ್ಯಮ್ ಸೋ ಪ್ರೌಡ್ ಆಫ್​ ಯೂ ...’ ಎಂದು ಬೆನ್ನು ತಟ್ಟಿದ್ದಾರೆ.

ಇಷ್ಟಕ್ಕೂ ಸೋನಾಕ್ಷಿ ಅಂತಹ ಕೆಲಸ ಏನು ಮಾಡಿದರು ಎಂಬ ಪ್ರಶ್ನೆ ಬರುವುದು ಸಹಜವೇ. ಅದಕ್ಕೆ ಉತ್ತರ ಏನೆಂದರೆ, ಸೋನಾಕ್ಷಿ ನಟನೆಯ ಜತೆಜತೆಗೆ ಚಿತ್ರಕಲೆಯಲ್ಲೂ ಅಪಾರ ಆಸಕ್ತಿ ಹೊಂದಿರುವವರು. ಸ್ಕೆಚ್, ಕ್ಯಾನ್ವಾಸ್ ಪೇಂಟಿಂಗ್ ಅಂತ ಶೂಟಿಂಗ್ ಇಲ್ಲದ ಸಮಯದಲ್ಲಿ ಬ್ಯುಸಿಯಾಗಿರುವವರು. ಈಗ ಸೋನಾಕ್ಷಿ, ‘ಬಿಡ್ ಫಾರ್​ ಗುಡ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದು, ತಮ್ಮ ಚಿತ್ರಕಲೆಯನ್ನು ಬಿಡ್ ಮಾಡುವುದಕ್ಕೆ ಹೊರಟಿದ್ದಾರೆ. ಅದರಿಂದ ಬಂದ ಹಣವನ್ನು ದಿನಗೂಲಿ ಕಾರ್ಮಿಕರಿಗೆ ಕೊಡುವುದಕ್ಕೆ ಚಿಂತನೆ ನಡೆಸಿದ್ದಾರೆ.

ಈ ವಿಷಯವಾಗಿ ಅವರು ಒಂದು ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಬಿಡ್ಡಿಂಗ್‌ನಿಂದ ಬರುವ ಹಣವನ್ನೆಲ್ಲಾ ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ಕೊಡಲಾಗುತ್ತದಂತೆ. ಸೋನಾಕ್ಷಿ ಅವರ ಈ ಕೆಲಸದ ಬಗ್ಗೆ ಬಾಲಿವುಡ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ‘ಐ ಆ್ಯಮ್ ಸೋ ಪ್ರೌಡ್ ಆಫ್​ ಯೂ ...’ ಎಂದು ಆಲಿಯಾ ಭಟ್ ಟ್ವೀಟ್ ಮಾಡಿದ್ದಾರೆ. ಅದರ ಜತೆಗೆ, ಇಂಥದ್ದೊಂದು ಕೆಲಸವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕರೆ ನೀಡಿದ್ದಾರೆ.

ಬರೀ ಆಲಿಯಾ ಭಟ್ ಅಷ್ಟೇ ಅಲ್ಲ, ಕೃತಿ ಸನೂನ್, ದಿಯಾ ಮಿರ್ಜಾ, ಕರಣ್ ಜೋಹಾರ್, ಗುಲ್ಶನ್ ಗ್ರೋವರ್ ಸೇರಿದಂತೆ ಹಲವರು ಸೋನಾಕ್ಷಿ ಅವರನ್ನು ಬೆಂಬಲಿಸಿದ್ದಾರೆ.