Alia Bhatt ಚಿತ್ರ Instagram 
ಸಿನಿವಾಣಿ

ಟ್ರೋಲರ್ ಬಾಯಿ ಮುಚ್ಚಿಸಿದ 'ಗಂಗೂಬಾಯಿ': ಆಲಿಯಾ ಭಟ್ ಅವರ ಈ ಒಂದು ಸಾಲು ಈಗ ಸಖತ್ ಟ್ರೆಂಡಿಂಗ್! Alia Bhatt

ಫ್ರಾನ್ಸ್​: ಕೇನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ತಮ್ಮ ಗ್ಲಾಮರಸ್ ಲುಕ್‌ನಿಂದ ಎಲ್ಲರ ಗಮನ ಸೆಳೆದಿದ್ದರು. ಆದರೆ, ಇದೇ ವೇಳೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್‌ಗೆ ಒಳಗಾಗಿದ್ದು, ಅದಕ್ಕೆ ಅವರು ನೀಡಿರುವ ದಿಟ್ಟ ಉತ್ತರ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬುಧವಾರ (ಮೇ 13) ಆಲಿಯಾ ಭಟ್ ಅತ್ಯಂತ ಸುಂದರವಾದ ವಿನ್ಯಾಸದ ಉಡುಪಿನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದು ಬಂದರು. ಅವರ ಭಾರತೀಯ ಸಂಸ್ಕೃತಿ ಮತ್ತು ಆಧುನಿಕತೆಯ ಸಮ್ಮಿಶ್ರಣದಂತಿದ್ದ ಅವರ ನೋಟವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. 
ಆಲಿಯಾ ಭಟ್ ಅವರ ಕೇನ್ಸ್ ಲುಕ್ ಅಭಿಮಾನಿಗಳು ಮತ್ತು ಫ್ಯಾಷನ್ ಉತ್ಸಾಹಿಗಳಿಂದ ಭಾರಿ ಪ್ರಶಂಸೆ ಪಡೆಯುತ್ತಿರುವ ಬೆನ್ನಲ್ಲೇ, ಕೆಲವರು ನಟಿಯ ಅಂತರರಾಷ್ಟ್ರೀಯ ಜನಪ್ರಿಯತೆಯನ್ನು ಅಪಹಾಸ್ಯ ಮಾಡಲು ಪ್ರಯತ್ನಿಸಿದರು. ಓರ್ವ ಬಳಕೆದಾರ ಎಂತಹ ವಿಷಾದ! ರೆಡ್ ಕಾರ್ಪೆಟ್ ಮೇಲೆ ನೀವು ಪೋಸ್ ನೀಡುತ್ತಿದ್ದರೂ ಅಲ್ಲಿ ಯಾರೂ ನಿಮ್ಮನ್ನು ಗಮನಿಸಲಿಲ್ಲ ಎಂದು ವ್ಯಂಗ್ಯವಾಗಿ ಎಮೋಜಿ ಸೇರಿಸಿ ಪೋಸ್ಟ್ ಮಾಡಿದ್ದರು. 

ಟ್ರೋಲ್‌ಗಳಿಗೆ ತಿರುಗೇಟು ನೀಡಿದ ಆಲಿಯಾ ಭಟ್

ಆದರೆ, ಟೀಕೆಗೆ ತಲೆಕೆಡಿಸಿಕೊಳ್ಳದ ಆಲಿಯಾ, ಯಾಕೆ ಕರುಣೆ, ಪ್ರೀತಿ? ನೀವು ನನ್ನನ್ನು ಗಮನಿಸಿದ್ದೀರಾ ಅಲ್ಲವೇ ಎಂದು ಶಾಂತವಾಗಿ ಪ್ರತಿಕ್ರಿಯಿಸುತ್ತಾ ಟ್ರೋಲರ್​ ಬಾಯಿಯನ್ನು ಮುಚ್ಚಿಸಿದ್ದಾರೆ. 

ಘಟನೆ ಹಿನ್ನಲೆ

 ಕೇನ್ಸ್ ಚಲನಚಿತ್ರೋತ್ಸವದ ರೆಡ್​ ಕಾರ್ಪೆಟ್​ ಮೇಲೆ ಆಲಿಯಾ ಅತ್ಯುತ್ತಮ ಉಡುಪಿನಲ್ಲಿ ಕ್ಯಾಮರಾಗಳಿಗೆ ಪೋಸ್​ ನೀಡಲು ಮುಂದೆ ಬಂದಾಗ, ಅವರ ಮುಂಭಾಗದಲ್ಲಿದ್ದ ಬಹುತೇಕ ಫೋಟೋಗ್ರಾಫರ್‌ಗಳು ಅವರ ಕಡೆಗೆ ಕ್ಯಾಮೆರಾ ತಿರುಗಿಸಲೇ ಇಲ್ಲ. ಬದಲಾಗಿ, ಅವರು ರೆಡ್ ಕಾರ್ಪೆಟ್‌ನ ಇನ್ನೊಂದು ಬದಿಯಲ್ಲಿದ್ದ ಬೇರೊಬ್ಬ ಗ್ಲೋಬಲ್ ಸೆಲೆಬ್ರಿಟಿಯನ್ನು ಸೆರೆಹಿಡಿಯುವಲ್ಲಿ ಮಗ್ನರಾಗಿದ್ದರು.
ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಬಳಕೆದಾರರು ಭಾರತದಲ್ಲಿ ಸ್ಟಾರ್ ಆಗಿರಬಹುದು, ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಲಿಯಾ ಅವರಿಗೆ ಇನ್ನೂ ಅಷ್ಟೊಂದು ಗುರುತಿಸುವಿಕೆ ಸಿಕ್ಕಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಕಾಮೆಂಟ್​ ಮಾಡಿದ್ದರೆ, ಇನ್ನೂ ಕೆಲವರು ಆಲಿಯಾ ಅವರಿಗೆ ಇದು ಮುಜುಗರದ ಕ್ಷಣ ಎಂದು ಟೀಕಿಸಿದ್ದರು. 

ಆಲಿಯಾ ಭಟ್​ ಬಗ್ಗೆ 

ಆಲಿಯಾ ಭಟ್ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರು. 2012ರಲ್ಲಿ ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ನಂತರ 'ಹೈವೇ', 'ಉಡ್ತಾ ಪಂಜಾಬ್', 'ರಾಜಿ' ಮತ್ತು 'ಗಂಗೂಬಾಯಿ ಕಾಠಿಯಾವಾಡಿ' ಅಂತಹ ಚಿತ್ರಗಳಲ್ಲಿ ಅದ್ಭುತ ನಟನೆಯನ್ನು ಪ್ರದರ್ಶಿಸಿದ್ದಾರೆ.
ನಟನೆ ಮಾತ್ರವಲ್ಲದೆ 'ಡಾರ್ಲಿಂಗ್ಸ್' ಚಿತ್ರದ ಮೂಲಕ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡ ಅವರು ಹಾಲಿವುಡ್​ಗೂ ಕಾಲಿಟ್ಟಿದ್ದಾರೆ. ಆದಾಗ್ಯೂ, ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆಲಿಯಾ, ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದ್ದಾರೆ (ಏಜೆನ್ಸೀಸ್​).