ಕಳೆದ ಡಿಸೆಂಬರ್ನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಆಗಿಯೇ ಬಿಟ್ಟರು ಎಂಬ ಸುದ್ದಿಯೊಂದು ದಟ್ಟವಾಗಿ ಹರಿದಾಡಿತ್ತು. ಆದರೆ, ಕಾರಣಾಂತರಗಳಿಂದ ಅವರಿಬ್ಬರೂ ಮದುವೆ ಆಗಲಿಲ್ಲ. ಆದರೂ ಅವರಿಬ್ಬರ ಮದುವೆ ಸುದ್ದಿ ತಿಂಗಳಿಗೊಮ್ಮೆಯಾದರೂ ಮುನ್ನೆಲೆಗೆ ಬರುತ್ತದೆ. ತಮ್ಮ ಬಗ್ಗೆ ಈ ರೀತಿ ಸುದ್ದಿ ಆಗುತ್ತಿರುವುದು ನೋಡಿದರೆ, ಇದೊಂಥರಾ ತೋಳ ಬಂತು ತೋಳ ಕಥೆಯಂತಿದೆ ಎಂದು ಸ್ವತಃ ಆಲಿಯಾ ಭಟ್ ಹೇಳಿಕೊಂಡಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, "ನಮ್ಮ ಮದುವೆ ವಿಷಯ ಆಗಾಗ ಕಾಣಿಸಿಕೊಳ್ಳುತ್ತಿರುವುದನ್ನು ನೋಡಿದರೆ ತೋಳ ಬಂತು ತೋಳ ಕಥೆ ನೆನಪಾಗುತ್ತದೆ. ಆಗಾಗ ನಮ್ಮಿಬ್ಬರ ಮದುವೆ ಬಗ್ಗೆ ಸುದ್ದಿ ಬರುತ್ತಲೇ ಇರುತ್ತದೆ. ಆಮೇಲೊಂದು ದಿನ ನಿಜಕ್ಕೂ ತೋಳ ಬಂದಾಗ ಜನ ಹೇಗೆ ನಂಬುವುದಿಲ್ಲವೋ, ನಾಳೆ ನಾವಿಬ್ಬರೂ ನಿಜಕ್ಕೂ ಮದುವೆಯಾದರೆ, ಜನ ನಂಬುವುದಿಲ್ಲ. ಇದು ವದಂತಿ ಇರಬಹುದು ಎಂದು ಸುಮ್ಮನಾಗುತ್ತಾರೆ' ಎಂದು ನಗುತ್ತಾರೆ.