ಸಿನಿವಾಣಿ

ಕಾಲೇಜು ಸೇರಿದ ಆಲಯಾ; ಸ್ಟುಡೆಂಟ್ ಆಫ್ ದಿ ಇಯರ್-3 ಚಿತ್ರಕ್ಕೆ ನಾಯಕಿ?

malli

ನಟಿ ಆಲಯಾ ಚಿತ್ರರಂಗಕ್ಕೆ ಹೊಸ ಮುಖ. ಆದರೆ ‘ಜವಾನಿ ಜಾನೇಮನ್’ ಹೆಸರು ಕೇಳಿದಾಗ ಇವರ ಹೆಸರು ನೆನಪಿಗೆ ಬರಬಹುದು. ಹೌದು, ಬಾಲಿವುಡ್ ನಟ ಸೈಫ್ ಅಲಿಖಾನ್ ಮತ್ತು ನಟಿ ಟಬು ಅಭಿನಯದ ‘ಜವಾನಿ ಜಾನೇಮನ್’ ಸಿನಿಮಾ ಮೂಲಕ ಆಲಯಾ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತಾದರೂ, ನಿಭಾಯಿಸಿದ ಪಾತ್ರಕ್ಕೆ ಮೆಚ್ಚುಗೆ ಸಂದಾಯವಾಗಿತ್ತು. ಹಾಗಾಗಿ

ಸಾಲು ಸಾಲು ಸಿನಿಮಾ ಅವಕಾಶಗಳು ಆಲಯಾ ಬಳಿ ಬರುತ್ತಿವೆ. ಹೀಗಿರುವಾಗಲೇ ಸದ್ದಿಲ್ಲದೆ ಕಾಲೇಜು ಸೇರಿ ಮತ್ತಷ್ಟು ಬಿಜಿಯಾಗಿದ್ದಾರೆ. ಅರ್ಥಾತ್; ‘ಸ್ಟುಡೆಂಟ್ ಆಫ್ ದಿ ಇಯರ್ 3’ ಚಿತ್ರದಲ್ಲಿ ನಾಯಕಿ ಆಗಿ ಆಲಯಾ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಪ್ರಾಜೆಕ್ಟ್​ಗೆ

ಸಹಿ ಮಾಡಿದ್ದು, ಏಪ್ರಿಲ್ ವೇಳೆಗೆ ಬ್ಯಾಂಕಾಕ್​ನಲ್ಲಿ ನಡೆಯುವ ಚಿತ್ರೀಕರಣದಲ್ಲಿಯೂ ಪಾಲ್ಗೊಳ್ಳಲಿದ್ದಾರಂತೆ ಎನ್ನಲಾಗುತ್ತಿದೆ. ಕರಣ್ ಜೋಹರ್ ನಿರ್ದೇಶನದ ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ವರುಣ್ ಧವನ್ ಹಾಗೂ ಆಲಿಯಾ ಭಟ್ ನಟಿಸಿದ್ದರು.

ಒಳ್ಳೆಯ ಯಶಸ್ಸು ಸಹ ಈ ತ್ರಿವಳಿ ಕಲಾವಿದರಿಗೆ ಸಿಕ್ಕಿತ್ತು. ಅದಾದ ಬಳಿಕ ‘ಸ್ಟುಡೆಂಟ್ ಆಫ್ ದಿ ಇಯರ್-2’ ಚಿತ್ರಕ್ಕೆ ಕರಣ್ ಬಂಡವಾಳ ಹೂಡಿದರೆ, ಪುನೀತ್ ಮಲ್ಹೋತ್ರಾ ನಿರ್ದೇಶನ ಮಾಡಿದ್ದರು. ಟೈಗರ್ ಶ್ರಾಫ್ ನಾಯಕನಾಗಿ ಕಾಣಿಸಿಕೊಂಡರೆ, ತಾರಾ ಸುತಾರಿಯಾ ಮತ್ತು ಅನನ್ಯಾ ಪಾಂಡೆ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದರು. ಇವರಿಗೂ ಈಗ ಸರಣಿ ಅವಕಾಶಗಳು ಸಿಗುತ್ತಿವೆ. ಇದೀಗ ಆಲಯಾ ಮೂರನೇ ಫ್ರಾಂಚೈಸ್​ನಲ್ಲಿ ಜತೆಯಾಗಿದ್ದಾರೆ. ಹಾಗಾದರೆ ಚಿತ್ರದ ನಾಯಕ ಯಾರು? ನಿರ್ದೇಶನದ ಉಸ್ತುವಾರಿ ಯಾರದ್ದು ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿಯೇ ಉತ್ತರ ಸಿಗಲಿದೆ. ಅಂದಹಾಗೆ, ಆಲಯಾ ಖ್ಯಾತ ನಟಿ ಪೂಜಾ ಬೇಡಿ ಪುತ್ರಿ.