ಸಿನಿವಾಣಿ

ಅಕ್ಷಿತಾ ಆಶಾವಾದ: ‘ಕಮಲ್ ಶ್ರೀದೇವಿ’ ಚಿತ್ರದ ಮೇಲೆ ಬಹುನಿರೀಕ್ಷೆಯಿಟ್ಟ ಸ್ಯಾಂಡಲ್‌ವುಡ್ ನಟಿ

ಶಿವಮಲ್ಲಯ್ಯ ಸ್ಥಾವರಮಠ

ಬೆಂಗಳೂರು: ‘ಸಿನಿಮಾ ರಂಗಕ್ಕೆ ಬಂದು 9 ವರ್ಷಗಳಾಗಿವೆ. ಕನ್ನಡ ಸೇರಿ ತಮಿಳು, ಮಲಯಾಳಂನ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರೂ ಸಣ್ಣ-ಪುಟ್ಟ ಪಾತ್ರಗಳಿಗೆ ಸೀಮಿತವಾಗಿಬಿಟ್ಟಿದ್ದೆ. ಅದಕ್ಕಾಗಿ ಮೂರು ವರ್ಷ ಗ್ಯಾಪ್ ತೆಗೆದುಕೊಂಡು ಮತ್ತೆ ‘ಕಮಲ್ ಶ್ರೀದೇವಿ’ ಮೂಲಕ ತೆರೆ ಮೇಲೆ ಬರುತ್ತಿದ್ದೇನೆ. ಈ ಚಿತ್ರ ನನ್ನ ವೃತ್ತಿ ಬದುಕಿಗೆ ಟರ್ನಿಂಗ್ ಪಾಯಿಂಟ್ ಆಗಲಿದೆ’ -ಇದು ‘ಕಮಲ್ ಶ್ರೀದೇವಿ’ ನಟಿ ಅಕ್ಷಿತಾ ಬೋಪಯ್ಯ ಭರವಸೆಯ ಮಾತು.

ಕನ್ನಡದ ‘ಅಂಬಿ ನಿಂಗ್ ವಯಸ್ಸಾಯ್ತೋ’, ‘ಐ ಲವ್ ಯೂ’ ಸೇರಿ ತಮಿಳು ಕಿರುತೆರೆಯಲ್ಲಿ ಮಿಂಚಿರುವ ಕೊಡಗು ಮೂಲದ ನಟಿ ಅಕ್ಷಿತಾ ಬೋಪಯ್ಯ‘ಕಮಲ್ ಶ್ರೀದೇವಿ’ ಮೂಲಕ ಮೂರು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಸದ್ಯ ಅವರ ನಟನೆಯ ಮೂರು ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಸಿನಿಮಾಗಳ ಕುರಿತು ‘ವಿಜಯವಾಣಿ’ ಜತೆ ಹಂಚಿಕೊಂಡರು. ‘ಇದು ನನಗೆ ಪರ್ವಕಾಲ.‘ಕಮಲ್ ಶ್ರೀದೇವಿ’ ಇದೇ 19ಕ್ಕೆ ರಿಲೀಸ್ ಆಗಲಿದೆ. ಟೀಸರ್, ಟ್ರೇಲರ್‌ನಲ್ಲಿ ನೋಡಿದಂತೆ ನನ್ನದು ಬೋಲ್ಡ್ ಪಾತ್ರ ಎನ್ನುತ್ತಿದ್ದಾರೆ. ಆದರೆ, ಅದು ಆಳವಾದ ಪಾತ್ರವೋ ಅಥವಾ ಪರಿಸ್ಥಿತಿಯೋ ಎಂಬುದನ್ನು ನೀವು ಸಿನಿಮಾದಲ್ಲೇ ನೋಡಬೇಕು. ಅದೇ ಕಾರಣಕ್ಕೆ ತಂಡವು ನನ್ನ ಕ್ಯಾರೆಕ್ಟರ್ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಟ್ಟಿಲ್ಲ. ಕನ್ನಡ ಸಿನಿಮಾಗಳಲ್ಲಿ ಇಂತಹ ಪಾತ್ರಗಳು ಕಾಣಿಸಿಕೊಂಡಿರುವುದು ತೀರಾ ಅಪರೂಪ. ಇಂತಹ ಪಾತ್ರಗಳು ಮಾಡಿದಾಗ ಮುಂದಿನ ಅವಕಾಶಗಳ ಬಗ್ಗೆ ಸಹಜ ಅಳುಕು ಇತ್ತು. ಡಬ್ಬಿಂಗ್‌ನಲ್ಲಿ ಸಿನಿಮಾ ಕ್ಲಿಪ್ ನೋಡಿದಾಗ ಪಾತ್ರದ ಬಗ್ಗೆ ಭರವಸೆ ಮೂಡಿತು. ಮುಂದೆ ನನ್ನ ವಿಭಿನ್ನವಾಗಿ ಗುರುತಿಸುತ್ತಾರೆ ಎಂದು. ಚಿತ್ರಕ್ಕೆ 15 ದಿನಗಳ ಕಾಲ ಮನೆಯಲ್ಲಿ ತಯಾರಿ ನಡೆಸಿದ್ದೆ. ಶೂಟಿಂಗ್ ಸಮಯದಲ್ಲಿಯೇ ಬಲಗೈಗೆ ಪೆಟ್ಟು ಮಾಡಿಕೊಂಡಿದ್ದೆ. ಇಡೀ ಚಿತ್ರೀಕರಣ ಅದೇ ನೋವಿನಲ್ಲಿಯೇ ಮಾಡಿ ಮುಗಿಸಿದ್ದೇನೆ’ ಎಂದು ಜರ್ನಿ ಬಗ್ಗೆ ಹಂಚಿಕೊಂಡರು.

‘ಫ್ಲರ್ಟ್’ ಮಾಡಿದ ನಟಿ

‘ಕಮಲ್ ಶ್ರೀದೇವಿ’ ಬೆನ್ನಲ್ಲೇ ಅಕ್ಷಿತಾ ಬೋಪಯ್ಯ ಅಭಿನಯದ ‘ಫ್ಲರ್ಟ್’ ಹಾಗೂ ಇನ್ನೊಂದು ಹೆಸರಿಡದ ಚಿತ್ರವೊಂದು ಬಿಡುಗಡೆ ಸಿದ್ಧವಾಗಿದೆ. ‘‘ಫ್ಲರ್ಟ್’ ಮೂಲಕ ಚಂದನ್ ಆಳವಾದ ಕಥೆ ಹೇಳುತ್ತಿದ್ದಾರೆ. ಅಲ್ಲಿ ನನ್ನದು ಸಂತ್ರಸ್ತೆಯ ಪಾತ್ರವಾಗಿದ್ದು, ಕ್ಯಾರೆಕ್ಟರ್ ಚೆನ್ನಾಗಿ ಮೂಡಿಬಂದಿದೆ. ಇನ್ನೊಂದು ಹೆಸರಡಿದ ಚಿತ್ರದ ಶೂಟಿಂಗ್ ಮುಗಿಸಿದ್ದೇನೆ. ಅದು ಕೂಡ ಸದ್ಯದಲ್ಲೇ ಘೋಷಣೆಯಾಗಲಿದೆ. ಇನ್ನು ಸದ್ಯ ಕನ್ನಡ-ಮಲಯಾಳಂ ಚಿತ್ರಕ್ಕೆ ಸಹಿ ಮಾಡಿದ್ದೇನೆ’ ಎನ್ನುತ್ತಾರೆ ಅಕ್ಷಿತಾ ಬೋಪಯ್ಯ.