ಸಿನಿವಾಣಿ

ಹೆಂಡ್ತಿಗೆ ಫೋನ್​​ ಕೊಟ್ಟು ಎಂದಾದರೂ ಸಿಕ್ಕಿಬಿದ್ದಿದ್ದೀರಾ? ಅಕ್ಷಯ್​ ಕುಮಾರ್​ ಕೊಟ್ಟ ಉತ್ತರ ವೈರಲ್​

ಮುಂಬೈ: ತಮ್ಮ ಮುಂದಿನ "ಖೇಲ್​ ಖೇಲ್​ ಮೇನ್"​ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​, ಇತ್ತೀಚಿನ ಮಾಧ್ಯಮ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಹಲವು ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಖೇಲ್​ ಖೇಲ್​ ಮೇನ್ ಸಿನಿಮಾ ಸ್ನೇಹಿತರ ಗುಂಪಿನ ನಡುವೆ ನಡೆಯುವ ಕತೆಯಾಗಿದೆ. ಫೋನ್​ನಲ್ಲಿ ಅಡಗಿರುವ ರಹಸ್ಯಗಳು ಮತ್ತು ಸುಳ್ಳುಗಳನ್ನು ಬಹಿರಂಗಪಡಿಸಲು ಪರಸ್ಪರರ ಫೋನ್‌ಗಳನ್ನು ಹುಡುಕಾಡುವ ಆಟದಲ್ಲಿ ತೊಡಗುವುದೇ ಈ ಸಿನಿಮಾದ ಒನ್​ ಲೈನ್​ ಸ್ಟೋರಿ ಆಗಿದೆ. ಫೋನ್​ ವಿಚಾರವನ್ನೇ ಮುಂದಿಟ್ಟುಕೊಂಡು ಅಕ್ಷಯ್​ ಅವರನ್ನು ಪ್ರಶ್ನಿಸಲಾಯಿತು. ಪತ್ನಿ ಟ್ವಿಂಕಲ್​ ಖನ್ನಾಗೆ ಫೋನ್​ ಕೊಟ್ಟು ಎಂದಾದರೂ ಮುಜುಗರಕ್ಕೀಡಾಗಿದ್ದೀರಾ ಎಂದು ಅಕ್ಷಯ್​ ಅವರನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ಆ ರೀತಿ ಏನು ಇಲ್ಲ, ನಾನು ಮುಚ್ಚಿಡಬೇಕಾದದ್ದು ಏನೂ ಇಲ್ಲ ಎಂದು ಹೇಳಿದರು.

ನನ್ನ ಸಂಗಾತಿಗೆ ನನ್ನ ಫೋನ್​ ತೋರಿಸಲು ನಾನು ಹೆದರಬೇಕಾಗಿಲ್ಲ. ನನ್ನ ಫೋನ್​ ಯಾವಾಗಲೂ ನನ್ನ ಸಿಬ್ಬಂದಿ ಬಳಿ ಇರುತ್ತದೆ ಅಥವಾ ಮನೆಯಲ್ಲೇ ಬಿದ್ದಿರುತ್ತದೆ. ನನ್ನ ಫೋನ್​ನಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ನನ್ನ ಜೀವನ ಒಂದು ರೀತಿಯಲ್ಲಿ ತೆರೆದ ಪುಸ್ತಕವಿದ್ದಂತೆ ಎಂದು ಅಕ್ಷಯ್​ ಕುಮಾರ್​ ಹೇಳಿದರು.

ಇದೇ ಸಂದರ್ಶನದಲ್ಲಿ ಯುವಕರಿಗೆ ಮದುವೆ ವಿಚಾರದಲ್ಲಿ ಏನಾದರೂ ಸಲಹೆ ನೀಡಬಹುದೇ ಎಂದು ಅಕ್ಷಯ್​ ಅವರನ್ನು ಕೇಳಲಾಯಿತು. ಆದರೆ, ಅಕ್ಷಯ್​ ಯಾವುದೇ ಸಲಹೆ ನೀಡಲು ಬಯಸಲಿಲ್ಲ. ಬದಲಾಗಿ ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಅನುಭವಗಳನ್ನು ಹೊಂದಿರಬೇಕು ಎಂದು ಒತ್ತಾಯಿಸಿದರು. ನಾನು ಯಾರಿಗೂ ಯಾವುದೇ ಸಲಹೆಗಳನ್ನು ನೀಡಲು ಬಯಸುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದ ಅನುಭವಗಳ ಮೂಲಕ ಕಲಿಯಬೇಕು. ಆದರೆ ಮದುವೆಯು ಜೀವನದ ಒಂದು ಸುಂದರವಾದ ಕ್ಷಣವಾಗಿದೆ. ಸಲಹೆಗಾಗಿ ನನ್ನ ಅಥವಾ ಬೇರೆಯವರ ಕಡೆಗೆ ನೋಡುವುದಕ್ಕಿಂತ ಪ್ರತಿಯೊಬ್ಬರೂ ಅದರ ಮೂಲಕವೇ ಹೋಗಬೇಕು ಮತ್ತು ತಿಳುವಳಿಕೆಯನ್ನು ಪಡೆಯಬೇಕು ಎಂದರು.

ಇದಕ್ಕೂ ಮುನ್ನ ಗಲಟಾ ಇಂಡಿಯಾ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ದಾಂಪತ್ಯ ಜೀವನದ ಯಶಸ್ಸಿನ ಬಗ್ಗೆ ಅಕ್ಷಯ್​ ಮಾತನಾಡಿದ್ದರು. ನಾನು ಮತ್ತು ಟ್ವಿಂಕಲ್ ತುಂಬಾ ವಿಭಿನ್ನ ವ್ಯಕ್ತಿಗಳಾಗಿದ್ದರೂ ಪರಸ್ಪರ ಗೌರವದಿಂದ ತಮ್ಮ ದಾಂಪತ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು. ನಾವು ಪರಸ್ಪರ ಬೇರೆ ಬೇರೆ ಧ್ರುವಗಳು. ಅವಳು ಎಡಕ್ಕೆ ಯೋಚಿಸಿದರೆ, ನಾನು ಬಲಕ್ಕೆ ಯೋಚಿಸುತ್ತೇನೆ. ಆದರೆ, ನಮ್ಮಿಬ್ಬರಲೂ ಇರುವ ಏಕೈಕ ಸಾಮಾನ್ಯ ಸಂಗತಿ ಏನೆಂದರೆ, ನಾವಿಬ್ಬರೂ ಬೇಗ ಮಲಗಿ, ಬೇಗ ಏಳಲು ಇಷ್ಟಪಡುತ್ತೇವೆ. ನಮ್ಮಿಬ್ಬರ ವಿಚಾರದಲ್ಲಿ ಗೌರವವು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಪರಸ್ಪರ ಸಮಯವನ್ನು ನೀಡುವುದು ಮುಖ್ಯವಾಗಿದೆ. ಜನರಲ್ಲಿ 36 ವಿಭಿನ್ನ ಲಕ್ಷಣಗಳಿರುತ್ತವೆ. ಅವೆಲ್ಲವೂ ದಂಪತಿಗಳಲ್ಲಿ ಸಾಮಾನ್ಯವಾಗಿರಬೇಕಾಗಿಲ್ಲ. ಆದರೆ ನೀವು ಒಬ್ಬರನ್ನೊಬ್ಬರು ಗೌರವಿಸುವ ಲಕ್ಷಣವನ್ನು ಹೊಂದಿದ್ದರೆ ಸಾಕು ಅದು ಸಂಬಂಧದಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಗುಣಗಳನ್ನು ಹೊಂದಲು ಸಮಾನವಾಗಿರುತ್ತದೆ ಎನ್ನುವ ಮೂಲಕ ತಮ್ಮ ಸಾಂಸಾರಿಕ ಯಶಸ್ಸಿನ ಗುಟ್ಟನ್ನು ಅಕ್ಷಯ್​ ಬಿಚ್ಚಿಟ್ಟರು.

ಅಂದಹಾಗೆ ಅಕ್ಷಯ್ ಮತ್ತು ಟ್ವಿಂಕಲ್ ಮದುವೆಯಾಗಿ 23 ವರ್ಷಗಳಾಗಿವೆ. 1999 ರಲ್ಲಿ ಇಂಟರ್ನ್ಯಾಷನಲ್ ಕಿಲಾಡಿ ಮತ್ತು ಜುಲ್ಮಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಇಬ್ಬರು ಪ್ರೀತಿಯಲ್ಲಿ ಸಿಲುಕಿದರು. ಬಳಿಕ 2001, ಜನವರಿ 17ರಂದು ವಿವಾಹವಾದರು. 2002 ರಲ್ಲಿ ಮಗ ಆರವ್ ಅವರನ್ನು ಸ್ವಾಗತಿಸಿದರು. ಇದಾದ 10 ವರ್ಷಗಳ ನಂತರ ಮಗಳು ನಿತಾರಾ ಅವರನ್ನು 2012ರಲ್ಲಿ ಸ್ವಾಗತಿಸಿದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಕ್ಷಯ್ ಸದ್ಯ ಅನೇಕ ಫ್ಲಾಪ್‌ ಸಿನಿಮಾಗಳೊಂದಿಗೆ ಸವಾಲಿನ ಅವಧಿಯನ್ನು ಎದುರಿಸುತ್ತಿದ್ದಾರೆ. ಅವರ ಕೊನೆಯ ಚಿತ್ರ ಸರ್ಫಿರಾ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ನಿರಾಸೆ ಮೂಡಿಸಿತು. ಅವರ ಮುಂಬರುವ ಚಿತ್ರ ಖೇಲ್ ಖೇಲ್ ಮೇನ್​ ಚಿತ್ರವು ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್​)