ನವದೆಹಲಿ: ನಟ ಅಕ್ಷಯ್ ಕುಮಾರ್ ಸದಾ ಒಂದಿಲ್ಲೊಂದು ಸೇವೆಯಲ್ಲಿ ಕೈ ಜೋಡಿಸಿರುತ್ತಾರೆ. ಕೋವಿಡ್ ಸಾಂಕ್ರಾಮಿಕದಿಂದ ಕಂಗೆಟ್ಟಿದ್ದ ಜನತೆಗೆ ಸಾಕಷ್ಟು ಸಹಾಯವನ್ನೂ ಅಕ್ಷಯ್ ಮಾಡಿದ್ದಾರೆ. ಕೋಟಿಗಟ್ಟಲೇ ಹಣವನ್ನು ಪಿಎಂ ಕೇರ್ಸ್ ನಿಧಿಗೂ ನೀಡಿದ್ದಾರೆ. ಇದೀಗ ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಳ್ಳಿಯೊಂದಕ್ಕೆ ತೆರಳಿ ಶಾಲೆಯ ನಿರ್ಮಾಣಕ್ಕೆ ಒಂದು ಕೋಟಿ ಹಣವನ್ನು ನೀಡಿದ್ದಾರೆ.
ಬಿಎಸ್ಎಫ್ ಯೋಧರ ಜತೆಗೆ ಒಂದಷ್ಟು ಹೊತ್ತು ಸಮಯ ಕಳೆದ ಅಕ್ಷಯ್, ಆ ಸಮಯದಲ್ಲಿ ಯೋಧರ ಜತೆಗೆ ಜಮ್ಮು ಕಾಶ್ಮೀರದ ತುಲೈಲ್ ಗ್ರಾಮಕ್ಕೂ ಭೇಟಿ ನೀಡಿದ್ದರು. ಗ್ರಾಮದಲ್ಲಿ ಶಾಲೆಯ ಸ್ಥಿತಿ ಕಂಡು ಮರುಗಿದ್ದರು. ತತಕ್ಷಣ 1 ಕೋಟಿ ದೇಣಿಗೆ ನೀಡಿ, ಶಾಲೆ ನಿರ್ಮಾಣ ಮಾಡಿಸುವುದಕ್ಕೆ ಮುಂದಾಗಿದ್ದಾರೆ.
ಅಕ್ಷಯ್ ಕೋಟಿ ರೂಪಾಯಿ ಘೋಷಣೆ ಮಾಡುತ್ತಿದ್ದಂತೆ, ಆ ಭಾಗದ ಜನರೆಲ್ಲ ಅಕ್ಷಯ್ಗೆ ಜೈ ಕಾರ ಹಾಕಿರುವುದಲ್ಲದೆ, ಶಾಲೆ ನಿರ್ಮಾಣವಾದ ಬಳಿಕ ಅಕ್ಷಯ್ ಅವರ ತಂದೆ ಹರಿ ಓಂ ಅವರ ಹೆಸರನ್ನೇ ಶಾಲೆಗೆ ಇಡುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಬೆಲ್ಬಾಟಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಜುಲೈನಲ್ಲಿ ಆ ಸಿನಿಮಾ ತೆರೆಗೆ ಬರಲಿದೆ. ಇತ್ತ ಇನ್ನೂ ಹಲವು ಚಿತ್ರಗಳ ಶೂಟಿಂಗ್ನಲ್ಲಿಯೂ ಬಿಜಿಯಾಗಿದ್ದಾರೆ.