ಮುಂಬೈ: ಲಕ್ಷ್ಮೀ ಚಿತ್ರದ ಯಶಸ್ಸಿನಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ದೀಪಾವಳಿಗೆ ಅಭಿಮಾನಿಗಳಿಗೆ ಹೊಸ ಉಡುಗೊರೆಯೊಂದನ್ನು ನೀಡಿದ್ದರು. ‘ರಾಮ್‌ಸೇತು’ ಹೆಸರಿನ ಹೊಸ ಸಿನಿಮಾ ಘೋಷಣೆ ಮಾಡಿ ಅದರ ಫಸ್ಟ್ ಲುಕ್ ಪೋಸ್ಟರನ್ನೂ ಅಕ್ಷಯ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಆ ಪೋಸ್ಟರ್ಗೆ ವಿರೋಧದ ಸುರಿಮಳೆಯನ್ನೇ ನೆಟ್ಟಿಗರು ಸುರಿಸುತ್ತಿದ್ದಾರೆ.
‘ರಾಮನ ಆದರ್ಶಗಳನ್ನು ಜೀವಂತವಾಗಿಸುವ ನಿಟ್ಟಿನಲ್ಲಿ ಮತ್ತು ಮುಂದಿನ ತಲೆಮಾರಿಗೆ ಅದನ್ನು ದಾಟಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇತುವೆಗಳಾಗೋಣ’ ಎಂದು ಪೋಸ್ಟ್ ಹಾಕಿ ಬರೆದುಕೊಂಡಿರುವ ಅವರು, ಮಿಥ್ ವರ್ಸಸ್ ರಿಯಾಲಿಟಿ ಎಂಬ ಉಪಶೀರ್ಷಿಕೆಯನ್ನೂ ಹಾಕಿದ್ದರು. ಇದೀಗ ಈ ಚಿತ್ರದ ಮೊದಲ ಪೋಸ್ಟರ್ ವಿವಾದದ ಕೇಂದ್ರಬಿಂದುವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಅಕ್ಷಯ್ ಕುಮಾರ್ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ‘ದಯಮಾಡಿ ತಾವು ಮತ್ತೊಮ್ಮೆ ರಾಮಾಯಣವನ್ನು ವೀಕ್ಷಿಸಿ’ ಎಂದರೆ, ‘ಧನ್ಯವಾದಗಳು ನಮ್ಮ ಹಿಂದೂಗಳಿಗೆ ನಿಮ್ಮ ಕಲಗಚ್ಚು ಬೇಡ’, ರಾಮ್ ಎನ್ನಬೇಡ, ಶ್ರೀರಾಮ್ ಎಂದು ಸಂಬೋಧಿಸು. ಏಕವಚನದಲ್ಲಿ ಮಾತನಾಡೋಕೆ ಶ್ರೀರಾಮ್ ನಿನ್ನ ಗೆಳೆಯನಲ್ಲ’, ‘ನಮಗೆ ನಿಮ್ಮ ಬೋಧನೆ ಬೇಡ' ಹೀಗೆ ಬಗೆಬಗೆ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಈ ಹಿಂದೆ ಶೌಕಿನ್ಸ್ ಸಿನಿಮಾದಲ್ಲಿ ಅಕ್ಷಯ್ ಜತೆಗೆ ಸಿನಿಮಾ ಮಾಡಿದ್ದ ನಿರ್ದೇಶಕ ಅಭಿಷೇಕ್ ಶರ್ಮಾ, ಇದೀಗ ರಾಮ ಸೇತುವೆಯನ್ನೇ ಪ್ರಧಾನವಾಗಿಸಿಕೊಂಡು ಚಿತ್ರ ಮಾಡುತ್ತಿದ್ದಾರೆ. ಅಕ್ಷಯ್ ಕೈಯಲ್ಲಿ ಸದ್ಯ ಮೂರ್ನಾಲ್ಕು ಚಿತ್ರಗಳಿದ್ದು, ಮೊದಲು ‘ಪೃಥ್ವಿರಾಜ್’ ಮುಗಿಸಬೇಕಿದೆ. ಆ ನಂತರ ‘ಅತರಂಗಿ ರೇ’, ‘ಬಚ್ಚನ್ ಪಾಂಡೆ’ ಮತ್ತು ‘ರಕ್ಷಾ ಬಂಧನ್’ ಚಿತ್ರಗಳಲ್ಲಿ ನಟಿಸಬೇಕಿದೆ. ಈ ಚಿತ್ರಗಳ ನಂತರ ‘ರಾಮ್ ಸೇತು’ ಚಿತ್ರದಲ್ಲಿ ಅಕ್ಷಯ್ ನಟಿಸಲಿದ್ದಾರೆ. -(ಏಜೆನ್ಸೀಸ್)