ಸಿನಿವಾಣಿ

ಇನ್ನೊಂದು ಹೊಸ ಚಿತ್ರ ಘೋಷಣೆ ಮಾಡಿದ್ರು ಅಕ್ಷಯ್​ ಕುಮಾರ್​

ಮುಂಬೈ: ರಕ್ಷಾಬಂಧನ ಹಬ್ಬದ ಸಂಭ್ರಮದಲ್ಲಿ 'ರಕ್ಷಾ ಬಂಧನ್​' ಎಂಬ ಹೊಸ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ್ದರು. ಇದೀಗ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇನ್ನೊಂದು ಹೊಸ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸುತ್ತಿರುವುದಷ್ಟೇ, ಆ ಚಿತ್ರದ ಪೋಸ್ಟರ್​ವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದಾರೆ.

ಚಿತ್ರದ ಹೆಸರೇನು ಗೊತ್ತಾ? 'ರಾಮ್​ ಸೇತು'. ಈ ಚಿತ್ರವನ್ನು ಅಭಿಷೇಕ್​ ಶರ್ಮ ನಿರ್ದೇಶನ ಮಾಡುತ್ತಿದ್ದಾರೆ. ಅಕ್ಷಯ್​ ಮತ್ತು ಅಭಿಷೇಕ್​, ಈ ಹಿಂದೆ 'ಶೌಕೀನ್ಸ್​' ಎಂಬ ಚಿತ್ರ ಮಾಡಿದ್ದರು. ಇದೀಗ ಈ ಚಿತ್ರಕ್ಕೆ ಇಬ್ಬರೂ ಜತೆಯಾಗುತ್ತಿದ್ದಾರೆ. ಈ ಚಿತ್ರಕ್ಕೆ 'ಮಿಥ್​ ವರ್ಸಸ್​ ರಿಯಾಲಿಟಿ' ಎಂಬ ಉಪಶೀರ್ಷಿಕೆ ಸಹ ಇದೆ.

ಈ ಕುರಿತು ಟ್ವೀಟ್​ ಮಾಡಿರುವ ಅಕ್ಷಯ್​ ಕುಮಾರ್, 'ರಾಮನ ಆದರ್ಶಗಳನ್ನು ಜೀವಂತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಮತ್ತು ಮುಂದಿನ ತಲೆಮಾರುಗಳಿಗೆ ಅದನ್ನು ದಾಟಿಸುವ ನಿಟ್ಟಿನಲ್ಲಿ ನಾವೆಲ್ಲರೂ ಸೇತುವೆಗಳಾಗೋಣ' ಎಂದು ಅವರು ಬರೆದುಕೊಂಡಿದ್ದಾರೆ.

ಈ ಚಿತ್ರವನ್ನು ಘೋಷಿಸಲಾಗಿದೆಯಾದರೂ, ಅದು ಪ್ರಾರಂಭವಾಗುವುದಕ್ಕೆ ಇನ್ನಷ್ಟು ಸಮಯ ಇದೆ. ಏಕೆಂದರೆ, ಅಕ್ಷಯ್​ ಕೈಯಲ್ಲಿ ಈಗ ಮೂರ್ನಾಲ್ಕು ಚಿತ್ರಗಳಿದ್ದು, ಮೊದಲು 'ಪೃಥ್ವಿರಾಜ್​' ಮುಗಿಸಬೇಕಿದೆ. ಆ ನಂತರ 'ಅತರಂಗಿ ರೇ', 'ಬಚ್ಚನ್​ ಪಾಂಡೆ' ಮತ್ತು 'ರಕ್ಷಾ ಬಂಧನ್​' ಚಿತ್ರಗಳಲ್ಲಿ ನಟಿಸಬೇಕಿದೆ. ಈ ಚಿತ್ರಗಳ ನಂತರ 'ರಾಮ್​ ಸೇತು' ಚಿತ್ರದಲ್ಲಿ ಅಕ್ಷಯ್​ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.