ಸಿನಿವಾಣಿ

ಹೊಸ ಮನೆ ಖರೀದಿಗಾಗಿ ಅಜಯ್​ ದೇವಗನ್​ ಮಾಡಿದ ಸಾಲ ಎಷ್ಟು?

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಮುಂಬೈನ ಜುಹು ಪ್ರದೇಶದಲ್ಲಿ ಬರೋಬ್ಬರಿ 60 ಕೋಟಿ ರೂ ಮೌಲ್ಯದ ಭವ್ಯ ಮನೆಯನ್ನು ಖರೀದಿಸಿದ ವಿಷಯ ಹೊಸದೇನಲ್ಲ. 20 ದಿನಗಳ ಹಿಂದೆಯೇ ಇಂಥದ್ದೊಂದು ಸುದ್ದಿ ದೊಡ್ಡ ಸೌಂಡು ಮಾಡಿತ್ತು. ಈಗ ಆ ಮನೆಗೆ ಸಂಬಂಧಿಸಿದ ಇನ್ನೊಂದು ಹೊಸ ವಿಷಯ ಹೊರಬಿದ್ದಿದೆ.

ಅದೇನೆಂದರೆ, ಈ ಮನೆ ಖರೀದಿ ಮಾಡುವುದಕ್ಕೆ ಅಜಯ್​ ದೇವಗನ್​ ಸಾಲ ಮಾಡಿದ್ದು, ಎಷ್ಟು ಮಾಡಿರಬಹದು ಎಂಬ ಚರ್ಚೆ ಇದೀಗ ನಡೆಯುತ್ತಿದೆ. ಮೂಲಗಳ ಪ್ರಕಾರ, 60 ಕೋಟಿ ರೂ ಮೌಲ್ಯದ ಈ ಮನೆಗೆ, ಅಜಯ್​ ದೇವಗನ್​ 18.75 ಕೋಟಿ ರೂ. ಸಾಲ ಮಾಡಿದ್ದಾರಂತೆ. ಮೊತ್ತ ಕೇಳಿದರೆ ಟೆನ್ಶನ್​ ಆಗಬಹುದು. ಆದರೆ, ಅಜಯ್​ ದೇವಗನ್​ಗೆ ಇದು ದೊಡ್ಡ ಮತ್ತವಲ್ಲ. ಚಿತ್ರವೊಂದಕ್ಕೆ ಅವರು ಪಡೆಯುವ ಸಂಭಾವನೆಯಲ್ಲಿ ಇದು ಅರ್ಧ ಭಾಗ ಮಾತ್ರ. ಹಾಗಾಗಿ, ಇದನ್ನು ಬಹಳ ಸುಲಭವಾಗಿ ಅವರು ತೀರಿಸಬಹುದು.

ಕರೊನಾ ಹಿನ್ನೆಲೆಯಲ್ಲಿ ಮುಂಬೈನಲ್ಲಿ ರಿಯಲ್​ ಎಸ್ಟೇಟ್ ವ್ಯಾಪಾರ ಇಳಿಮುಖವಾಗಿದೆ. ಮೊದಲಿನ ವಹಿವಾಟು ಇಲ್ಲ. ಅದನ್ನೇ ಬಂಡವಾಳವಾಗಿಸಿಕೊಂಡು, ಕೋಟಿಕೋಟಿ ಬೆಲೆ ಬಾಳುವ ಬಂಗಲೆಗಳು ಮತ್ತು ಅಪಾರ್ಟ್​ಮೆಂಟ್​ಗಳನ್ನು ಬಾಲಿವುಡ್​ ಸೆಲೆಬ್ರಿಟಿಗಳು, ಕಳೆದ ಕೆಲವು ತಿಂಗಳುಗಳಿಂದ ಖರೀದಿಸುತ್ತಿದ್ದಾರೆ. ಈ ಸಾಲಿಗೆ ಅಜಯ್​ ದೇವಗನ್​ ಸಹ ಸೇರಿಕೊಂಡಿದ್ದಾರೆ. ಈಗಾಗಲೇ ಮನೆಯ ಫರ್ನಿಚರ್​ ಕೆಲಸಗಳು ನಡೆಯುತ್ತಿದ್ದು, ಇನ್ನೇನು ಶೀಘ್ರದಲ್ಲಿ ಹೊಸ ಮನೆಯ ಪ್ರವೇಶ ಪಡೆಯಲಿದ್ದಾರೆ.

ಈಗಾಗಲೇ ಅದೇ ಪ್ರದೇಶದಲ್ಲಿ ಮನೆ ಹೊಂದಿರುವ ಅಜಯ್ ಇದೀಗ ಮತ್ತೊಂದು ಮನೆ ಖರೀದಿ ಮಾಡಿರುವುದು ವಿಶೇಷ. 6500 ಚದುರಡಿ ಪ್ರದೇಶದಲ್ಲಿರುವ ಈ ಮನೆಯನ್ನು ಕಳೆದ ವರ್ಷದ ಕೊನೆಯಲ್ಲೇ ಅಜಯ್ ದೇವಗನ್​ ಖರೀದಿಸಿದ್ದರು ಎಂದು ಹೇಳಲಾಗುತ್ತಿದೆ.