Tamil Nadu Election (ಚಿತ್ರ X)
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ರಾಜಕೀಯ ಪಂಡಿತರ (Tamil Nadu Election) ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ಈ ಐತಿಹಾಸಿಕ ಜಯಕ್ಕೆ ದಕ್ಷಿಣ ಭಾರತದ ಚಿತ್ರರಂಗದ ದಿಗ್ಗಜರು ಅಭಿನಂದನೆಗಳ ಸುರಿಮಳೆಗರೆದಿದ್ದಾರೆ.
ಪೋಸ್ಟ್ನಲ್ಲೇನಿದೆ?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡ ತಮಿಳಗ ವೆಟ್ರಿ ಕಳಗಂನ ಅಧ್ಯಕ್ಷ ತಿರು ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಹೃದಯ ಪೂರ್ವ ಅಭಿನಂದನೆಗಳು ಎಂದು ಹಿರಿಯ ನಟ ರಜನಿಕಾಂತ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ನಟ ಧನುಷ್ ಕೂಡಾ ಅಭಿನಂದನೆ ಹಂಚಿಕೊಂಡಿದ್ದು, ತಮ್ಮ ಮೊದಲ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿ ತಮಿಳುನಾಡಿನ ಜನರ ಅಪಾರ ಬೆಂಬಲ ಮತ್ತು ಪ್ರೀತಿಯನ್ನು ಗಳಿಸಿ ಸರ್ಕಾರ ರಚಿಸಲು ಸಜ್ಜಾಗಿರುವ ವಿಜಯ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ತೆಲುಗು ಚಲನಚಿತ್ರೋದ್ಯಮದಿಂದ ರಾಮ್ ಚರಣ್, "ತಮಿಳುನಾಡು ಚುನಾವಣೆಯಲ್ಲಿ ಗಮನಾರ್ಹ ಗೆಲುವು ಸಾಧಿಸಿದ ನಟ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ದೂರದೃಷ್ಟಿ ಮತ್ತು ಜನರೊಂದಿಗಿನ ಸಂಪರ್ಕವು ನಿಜವಾಗಿಯೂ ಪ್ರತಿಧ್ವನಿಸಿದೆ. ತಮಿಳುನಾಡನ್ನು ನಿರಂತರ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಬಯಸುತ್ತೇನೆ ಎಂದು ಬರೆದಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ತಮ್ಮ ಹರ್ಷ ವ್ಯಕ್ತಪಡಿಸುತ್ತಾ, ಅಭಿನಂದನೆಗಳು ವಿಜಯ್ ಸರ್ ನೀವು ಗೆದ್ದಿರುವುದು ತುಂಬಾ ಸಂತೋಷವಾಗಿದೆ. ಈ ಹೊಸ ಯುಗದಲ್ಲಿ ನಿಮ್ಮನ್ನು ನೋಡಲು ತುಂಬಾ ಉತ್ಸುಕರಾಗಿದ್ದೇವೆ ಎಂದು ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ಹಿರಿಯ ನಟ ಕಮಲ್ ಹಾಸನ್, "ಜನರ ವಿಶ್ವಾಸ ಗಳಿಸಿ ತಮ್ಮ ಮೊದಲ ಚುನಾವಣೆಯಲ್ಲಿಯೇ ಅದ್ಭುತ ಗೆಲುವು ಸಾಧಿಸಿದ ವಿಜಯಶಾಲಿ ತಮಿಳಗ ವೆಟ್ರಿ ಕಳಗಂ ನಾಯಕ ತಿರು ವಿಜಯ್ ಮತ್ತು ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು ಸಾರ್ವಜನಿಕರ ಸೇವೆಯನ್ನು ವೃದ್ಧಿಸಲು ನನ್ನ ಶುಭಾಶಯ ಎಂದು ಬರೆದು ಪೋಸ್ಟ್ ಮಾಡಿದ್ದಾರೆ .
ಅವರಲ್ಲದೆ, ಎ.ಆರ್. ರೆಹಮಾನ್, ವೆಂಕಟೇಶ್ ದಗ್ಗುಬಾಟಿ, ಚಿರಂಜೀವಿ, ಕಾಜಲ್ ಅಗರ್ವಾಲ್, ಅನಿರುದ್ಧ್ ರವಿಚಂದರ್, ಸಿಲಂಬರಸನ್ ಟಿ.ಆರ್, ಕಾರ್ತಿ, ಮಹೇಶ್ ಬಾಬು ಮತ್ತು ಇತರ ಅನೇಕ ಪ್ರಮುಖರು ವಿಜಯ್ ಅವರನ್ನು ಅಭಿನಂದಿಸಿದರು. ಇದು ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಅವರು ಗಳಿಸಿರುವ ವ್ಯಾಪಕ ಬೆಂಬಲವನ್ನು ಪ್ರತಿಬಿಂಬಿಸುತ್ತದೆ (ಏಜೆನ್ಸೀಸ್).