ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಈ ವರ್ಷ ಮಲಯಾಳಂ ಚಿತ್ರರಂಗ ಸಿನಿಮಾಗಳ ಯಶಸ್ಸಿನಿಂದ ಮಾತ್ರವಲ್ಲದೇ ವಿವಾದಗಳಿಂದಲೂ ಸದ್ದು ಮಾಡುತ್ತಿದೆ. ಆದರೆ, 2024ರಲ್ಲಿ ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಿಗೆ ಇದುವರೆಗೂ ದೊಡ್ಡ ಮಟ್ಟದ ಸಕ್ಸಸ್ ದೊರೆತಿಲ್ಲ. ಇದೀಗ ದೀಪಾವಳಿ ಹಬ್ಬದ ಬಳಿಕ ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳ ಸೌಂಡ್ ಜೋರಾಗಿ ಕೇಳಿಸುವ ನಿರೀಕ್ಷೆ ಇದೆ. ದೊಡ್ಡ ಸ್ಟಾರ್ಗಳ, ಬಿಗ್ಬಜೆಟ್ ಚಿತ್ರಗಳು ಸಾಲಾಗಿ ತೆರೆಗೆ ಬರಲು ರೆಡಿಯಾಗಿರುವುದೇ ಅದಕ್ಕೆ ಕಾರಣ.
ಕನ್ನಡಕ್ಕೆ ಹ್ಯಾಟ್ರಿಕ್ ಹುಮ್ಮಸ್ಸು
ಕನ್ನಡದಲ್ಲಿ ಇದುವರೆಗೂ 170ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿವೆ. ಇದೇ ತಿಂಗಳ 11ರಂದು ರಿಲೀಸ್ ಆದ ಪ್ಯಾನ್ ಇಂಡಿಯಾ "ಮಾರ್ಟಿನ್' ಸೇರಿ ಬಹುತೇಕ ಸಿನಿಮಾಗಳು ಬಾಕ್ಸಾಫಿಸಿನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುವಲ್ಲಿ ಸೋತಿವೆ. ಆದರೆ, ಇದೇ ಗುರುವಾರ (ಅ. 31) ತೆರೆಗೆ ಬರಲಿರುವ ಶ್ರೀಮುರಳಿ, ರುಕ್ಮಿಣಿ ವಸಂತ್ ಅಭಿನಯದ ಡಾ. ಸೂರಿ ನಿರ್ದೇಶನದ "ಬಘೀರ' ಪ್ರೇಕ್ಷಕರನ್ನು ಮತ್ತೆ ಥಿಯೇಟರ್ಗಳಿಗೆ ಕರೆತರುವ ನಿರೀೆಯಿದೆ. ಬಳಿಕ ಶಿವರಾಜಕುಮಾರ್ ನಟಿಸಿರುವ ನರ್ತನ್ ಆ್ಯಕ್ಷನ್-ಕಟ್ ಹೇಳಿರುವ "ಭೈರತಿ ರಣಗಲ್' ಇದೇ ನ. 15ರಂದು ಬಿಡುಗಡೆಯಾಗಲಿದ್ದು, ಬಳಿಕ ಉಪೇಂದ್ರ ನಟಿಸಿ, ನಿರ್ದೇಶಿಸಿರುವ "ಯುಐ' ಡಿ. 20ರಂದು ರಿಲೀಸ್ ಆಗಲಿದೆ. ಈ ಮೂರು ಚಿತ್ರಗಳೂ ಬಾಕ್ಸಾಫಿಸಿನಲ್ಲಿ ಹ್ಯಾಟ್ರಿಕ್ ಯಶಸ್ಸು ಸಾಧಿಸುವ ನಿರೀಕ್ಷೆ ಇದೆ.
ಬಾಲಿವುಡ್ನಲ್ಲಿ ಆ್ಯಕ್ಷನ್ ಪಟಾಕಿ
"ಸ್ತ್ರೀ 2', "ಮುಂಜ್ಯಾ' ಹೊರತುಪಡಿಸಿ ಬಾಲಿವುಡ್ನಲ್ಲಿ ಈ ವರ್ಷ ದೊಡ್ಡ ಮಟ್ಟದ ಯಶಸ್ಸು ಕಂಡ ಚಿತ್ರಗಳು ಬೆರಳೆಣಿಕೆಯಷ್ಟೇ. ಅದರ ನಡುವೆಯೂ ನ. 1ರಂದು "ಭೂಲ್ ಭುಲಯ್ಯಾ 3' ಮತ್ತು "ಸಿಂಂ ಅಗೇನ್' ಸಿನಿಮಾಗಳು ರಿಲೀಸ್ ಆಗುತ್ತಿದ್ದು, ಹಿಂದಿ ಚಿತ್ರರಂಗಕ್ಕೆ ಹೊಸ ವೇಗ ನೀಡುವ ನಿರೀೆ ಇದೆ. ಅನೀಸ್ ಬಾಜ್ಮೀ ನಿರ್ದೇಶನದ, ಕಾರ್ತಿಕ್ ಆರ್ಯನ್, ಮಾಧುರಿ ದೀತ್, ವಿದ್ಯಾ ಬಾಲನ್, ತೃಪ್ತಿ ದಿಮ್ರಿ ನಟಿಸಿರುವ "ಭೂಲ್ ಭುಲಯ್ಯಾ 3' ಹಾರರ್ ಕಾಮಿಡಿ ಚಿತ್ರವಾಗಿದ್ದು, ಅಜಯ್ ದೇವ್ಗನ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಕರೀನಾ ಕಪೂರ್ ನಟಿಸಿರುವ "ಸಿಂಘಂ ಅಗೇನ್' ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದೆ. ಈ ಎರಡು ಚಿತ್ರಗಳ ಬಳಿಕ ಡಿ. 25ರಂದು ವರುಣ್ ಧವನ್ ಅಭಿನಯದ ಆ್ಯಕ್ಷನ್ ಸಿನಿಮಾ "ಬೇಬಿ ಜಾನ್' ಮತ್ತು ಆಮಿರ್ ಖಾನ್ ನಟಿಸಿರುವ "ಸಿತಾರೆ ಜಮೀನ್ ಪರ್' ಬಿಡುಗಡೆಯಾಗಲಿವೆ.
ಕಾಲಿವುಡ್ನಲ್ಲಿ ಕಂಗುವಾ ಹವಾ
ತಮಿಳು ಚಿತ್ರರಂಗ ಕೂಡ ಈ ವರ್ಷದಂತ್ಯದ ಸ್ಟಾಕ್ ಕ್ಲಿಯರೆನ್ಸ್ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಇಟ್ಟುಕೊಂಡಿದೆ. ಇದೇ ಶುಕ್ರವಾರ (ಅ. 31) ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ನಟಿಸಿರುವ "ಅಮರನ್' ರಿಲೀಸ್ ಆಗಲಿದ್ದು, ನ. 14ರಂದು ಶಿವ ಆ್ಯಕ್ಷನ್- ಕಟ್ ಹೇಳಿರುವ ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ ನಟಿಸಿರುವ ಬಹುನಿರೀತ "ಕಂಗುವಾ' ತೆರೆಗೆ ಬರಲಿದೆ. ಬಹುಕೋಟಿ ಬಜೆಟ್ನಲ್ಲಿ ಮೂಡಿಬಂದಿರುವ ಪ್ಯಾನ್ ಇಂಡಿಯಾ ಚಿತ್ರವಾದ ಕಾರಣ "ಕಂಗುವಾ' ಮೇಲೆ ಸಾಕಷ್ಟು ನಿರೀೆಯಿದ್ದು, ನಿರ್ಮಾಪಕ ಜ್ಞಾನವೇಲ್ "ಸಿನಿಮಾ ಪಕ್ಕಾ 2000 ಕೋಟಿ ಗಳಿಕೆ ಮಾಡಲಿದೆ' ಎಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಬಳಿಕ ಡಿ. 20ರಂದು ವೆಟ್ರಿಮಾರನ್ ನಿರ್ದೇಶನದ ವಿಜಯ್ ಸೇತುಪತಿ, ಸೂರಿ ನಟಿಸಿರುವ "ವಿಡುತಲೈ 2' ರಿಲೀಸ್ ಆಗಲಿದ್ದು, ಮೊದಲ ಭಾಗದ ಯಶಸ್ಸಿನಿಂದಾಗಿ ಈ ಸೀಕ್ವೆಲ್ ಕೂಡ ಗಮನ ಸೆಳೆದಿದೆ.
ಟಾಲಿವುಡ್ನಲ್ಲಿ ಲಕ್ಕಿ ಪುಷ್ಪರಾಜ್!
ಟಾಲಿವುಡ್ನಲ್ಲಿ "ಕಲ್ಕಿ 2898 ಎಡಿ', "ದೇವರ 1', "ಹನುಮಾನ್', "ಗುಂಟೂರು ಕಾರಂ' ಸೇರಿ ಕೆಲ ಚಿತ್ರಗಳು ಬಾಕ್ಸಾಫಿಸಿನಲ್ಲಿ ಗೆದ್ದು ಬೀಗಿವೆ. ಆದರೆ, "ಈಗಲ್', "ಆಪರೇಷನ್ ವ್ಯಾಲಂಟೈನ್', "ಸರಿಪೋದಾ ಶನಿವಾರಂ', "ಡಬಲ್ ಇಸ್ಮಾರ್ಟ್', "ಭೀಮ', "ದ ಫ್ಯಾಮಿಲಿ ಸ್ಟಾರ್' ಸೇರಿ ಕೆಲ ನಿರೀತ ಸಿನಿಮಾಗಳು ಸೋತಿವೆ ಕೂಡ. ಈ ಸೋಲು -ಗೆಲುವುಗಳ ಲೆಕ್ಕಾಚಾರದಲ್ಲೇ ಈ ಶುಕ್ರವಾರ ತಾರಾಗಣ ಮತ್ತು ಟ್ರೇಲರ್ ಮೂಲಕವೇ ಕುತೂಹಲ ಮೂಡಿಸಿರುವ ದುಲ್ಕರ್ ಸಲ್ಮಾನ್ ನಟಿಸಿರುವ "ಲಕ್ಕಿ ಭಾಸ್ಕರ್' ತೆರೆಗೆ ಬರಲಿದೆ. ಆ ಬಳಿಕ ಡಿ. 5ರಂದು ಸುಕುಮಾರ್ ನಿರ್ದೇಶನದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ "ಪುಷ್ಪ 2: ದ ರೂಲ್' ರಿಲೀಸ್ ಆಗಲಿದೆ. ರಿಲೀಸ್ಗೂ ಮುನ್ನವೇ 1000 ಕೋಟಿಗೂ ಹೆಚ್ಚು ಬಿಜಿನೆಸ್ ಮಾಡಿದೆ ಎನ್ನಲಾಗಿರುವ "ಪುಷ್ಪ' ಸೀಕ್ವೆಲ್ ಬಗ್ಗೆ ನಿರೀಕ್ಷೆ ಗರಿಗೆದರಿದೆ.