ಸಿನಿವಾಣಿ

ಸುಶಾಂತ್​ ಸಾವಲ್ಲೂ ಸಂಭ್ರಮಿಸೋದು ಅಂದ್ರೆ ಇದೇನಾ?; ಆಲಿಯಾ ಭಟ್, ಕರಣ್​ ಜೋಹರ್​ ವಿರುದ್ಧ ನೆಟ್ಟಿಗರು ಗರಂ!

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಭಾನುವಾರ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ಆಲಿಯಾ ಭಟ್ ಮತ್ತು ಕರಣ್​ ಜೋಹರ್​ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಬಹಿರಂಗವಾಗಿ ಅವರನ್ನು ತರಾಟೆಗೆ ತೆಗೆದುಕೊಂಡು, ಬಿಸಿ ಮುಟ್ಟಿಸಿದ್ದಾರೆ. ಹಾಗಾದರೆ ಅಷ್ಟಕ್ಕೂ ಆಲಿಯಾ ಮತ್ತು ಕರಣ್​ ಮೇಲೆ ನೆಟ್ಟಿಗರು ಗರಂ ಆಗಲು ಕಾರಣವಾದರೂ ಏನು?

ಹೌದು, 2014ರಲ್ಲಿ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಆಲಿಯಾ ಭಟ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಪಾಲ್ಗೊಂಡಿದ್ದರು. ಎಂದಿನಂತೆ ಕರಣ್​ ಜೋಹರ್​ ನಿರೂಪಕರಾಗಿದ್ದರು. ಹೀಗಿರುವಾಗಲೇ ರ್ಯಾಪಿಡ್​ ಫೈಯರ್​ ರೌಂಡ್​ ಪ್ರಶ್ನೆಗಳನ್ನು ಆಲಿಯಾಗೆ ಕರಣ್​ ಕೇಳುತ್ತ ಹೋದರು. ನೀವು ಮದುವೆಯಾಗುವುದಾದರೆ, ಡೇಟ್​ ಮಾಡುವುದಾದರೆ ಮತ್ತು ಕೊಲೆ ಮಾಡುವುದಾದರೆ ಈ ಮೂವರಲ್ಲಿ ಯಾರನ್ನು ಮಾಡುತ್ತೀರಿ. ಆಪ್ಷನ್ಸ್; ರಣವೀರ್ ಸಿಂಗ್, ರಣಬೀರ್​ ಕಪೂರ್, ಸುಶಾಂತ್ ಸಿಂಗ್​ ರಜಪೂತ್.. ಅದಕ್ಕೆ ಉತ್ತರಿಸಿದ ಆಲಿಯಾ, ರಣಬೀರ್​ನನ್ನು ಮದುವೆಯಾಗುವುದಾಗಿ, ರಣವೀರ್​ ಜತೆ ಡೇಟ್​ ಮತ್ತು ಸುಶಾಂತ್ ಸಿಂಗ್​ನನ್ನು ಕೊಲ್ಲುದಾಗಿ ಉತ್ತರ ನೀಡಿದ್ದರು.

ಅದಾದ ಬಳಿಕ ಇನ್ನೊಂದು ಪ್ರಶ್ನೆಯನ್ನು ಎಸೆದಿದ್ದರು ಕರಣ್, ಈ ಮೂವರಲ್ಲಿ ಯಾರು ಸೆಕ್ಸಿ ಮತ್ತು ಹಾಟ್​ ಆಗಿದ್ದಾರೆ ಹೇಳಿ ಎಂದು ಆಲಿಯಾಗೆ ಕೇಳಿದರು. ರಣವೀರ್​ ಸಿಂಗ್, ಸುಶಾಂತ್​ ಸಿಂಗ್ ಮತ್ತು ವರುಣ್ ಧವನ್.. ಈ ಮೂವರ ಹೆಸರುಗಳನ್ನು ಹೇಳುತ್ತಿದ್ದಂತೆ, ಸುಶಾಂತ್ ಸಿಂಗ್ ರಜಪೂತ್​ ಯಾರು? ಎಂದು ಉತ್ತರಿಸಿದ್ದರು ಆಲಿಯಾ. ಆರು ವರ್ಷದ ಹಿಂದಿನ ವಿಡಿಯೋ ತುಣುಕೀಗ ಎಲ್ಲೆಡೆ ವೈರಲ್​ ಆಗಿದ್ದು, ಆಲಿಯಾ ಮತ್ತು ಕರಣ್​ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ರಿಯಾಲಿಟಿ ಶೋದಲ್ಲಿ ಇಂಥ ಪ್ರಶ್ನೆಗಳ ಅವಶ್ಯಕತೆ ಇದೆಯಾ ಎಂದು ಅವರ ಕಾಲೆಳೆದಿದ್ದಾರೆ.

ಆಲಿಯಾ ಭಟ್​ ಸಹ ಆಗ ತಾನೇ ಮೊದಲ ಸಿನಿಮಾ ಖುಷಿಯಲ್ಲಿದ್ದರು. ಅಷ್ಟೊತ್ತಿಗಾಗಲೇ ಕಿರುತೆರೆಯಲ್ಲಿ ಸುಶಾಂತ್​ ಹೆಸರು ಮಾಡಿದ್ದರು. ಸಿನಿಮಾ ಅವಕಾಶಗಳೂ ಅವರನ್ನು ಹುಡುಕಿಕೊಂಡು ಬಂದಿದ್ದವು. ಕೈ ಪೋ ಚೇ ಚಿತ್ರದಲ್ಲಿ ನಟಿಸಿ ಮೆಚ್ಚುಗೆಯನ್ನೂ ಗಿಟ್ಟಿಸಿಕೊಂಡಿದ್ದರು. ಹೀಗಿರುವಾಗ ಪ್ರತಿಭಾನ್ವಿತ ನಟನ ಬಗ್ಗೆ ಹೀಗೆ ಮಾತನಾಡಿರುವ ಆಲಿಯಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. (ಏಜೆನ್ಸೀಸ್)