ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಿರ್ದೇಶಕ ಶಶಾಂಕ್ ಆ್ಯಕ್ಷನ್&ಕಟ್ ಹೇಳಿದ್ದ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ "ಲವ್ 360' ಮೂಲಕ ಸ್ಯಾಂಡಲ್ವುಡ್ಗೆ ನಾಯಕನಾಗಿ ಪದಾರ್ಪಣೆ ಮಾಡಿದ ನಟ ಡಾ. ಪ್ರವೀಣ್. ಮೊದಲ ಚಿತ್ರದಲ್ಲೇ ನಟನೆ, ಆ್ಯಕ್ಷನ್ ಮೂಲಕ ಗಮನ ಸೆಳೆದ ಅವರು ಕಳೆದ ವರ್ಷ "ದೇಸಾಯಿ' ಎಂಬ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ಸದ್ದಿಲ್ಲದೇ ಹೊಸ ಚಿತ್ರ ಪ್ರಾರಂಭಿಸಿರುವ ಅವರು ಈ ಮೂರನೇ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ಮಿಂಚಲು ರೆಡಿಯಾಗಿದ್ದಾರೆ.
""ಲವ್ 360' ಬಳಿಕ ಹೆಚ್ಚು ಲವ್ಸ್ಟೋರಿಗಳೇ ಬರುತ್ತಿದ್ದವು. ಅದರಲ್ಲಿ ವಿಭಿನ್ನ ಅಂತ ಅನ್ನಿಸಿದ ಉತ್ತರ ಕರ್ನಾಟಕದ ಕಥೆಯ "ದೇಸಾಯಿ' ಆಯ್ಕೆ ಮಾಡಿಕೊಂಡಿದ್ದೆ. ಇದೀಗ ಈ ಎರಡೂ ಚಿತ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವ "ಗುಮ್ಮ' ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದು ಮಂಗಳೂರಿನಲ್ಲಿ ನಡೆಯುವ ಕಥೆ. ಕಳೆದ ವಾರದಿಂದ ಪೂರ್ತಿ ತಂಡ ಮಂಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ ಪ್ರವೀಣ್.
ಈ ಹಿಂದೆ "ಮಸ್ತ್ ಕಲಂದರ್' ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ಚಂದ್ರು, "ಗುಮ್ಮ' ನಿರ್ದೇಶಿಸುತ್ತಿದ್ದಾರೆ. ಚಿತ್ರದ ಬಗ್ಗೆ ಡಾ. ಪ್ರವೀಣ್, "ಉಪೇಂದ್ರ ಸರ್ ನಟಿಸಿದ್ದ "ಕಲ್ಪನಾ' ಮತ್ತು ತಮಿಳಿನ ರಾಘವ ಲಾರೆನ್ಸ್ ಅವರ "ಕಾಂಚನಾ' ರೀತಿಯ ಚಿತ್ರವಿದು. ಕಾಲೇಜ್ ಸ್ಟೋರಿಯಾದರೂ ಹಲವು ವಿಶೇಷತೆಗಳಿಂದ ಕೂಡಿರಲಿದೆ. ನಾನು ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಹೀಗಾಗಿ ಪಾರ್ಮೆನ್ಸ್ಗೆ ಪ್ರಾಮುಖ್ಯವಿರಲಿದೆ. ವರ್ಕ್ಶಾಪ್ ಮಾಡಿ ಸಾಕಷ್ಟು ಸಿದ್ಧತೆ ನಡೆಸಿ, ಪಾತ್ರಕ್ಕೆ ರೆಡಿಯಾಗಿ ಇದೀಗ ಶೂಟಿಂಗ್ ಪ್ರಾರಂಭಿಸಿದ್ದೇವೆ. ಮುಂದಿನ ಜನವರಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲಾ$್ಯನ್ ಮಾಡಿಕೊಂಡಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ.
ಕಳೆದ ಮೂರು ವರ್ಷಗಳಿಂದ ಸಿನಿಮಾಗಳಲ್ಲಿ ಬಿಜಿಯಿದ್ದರೂ, ಪ್ರವೀಣ್ ಶಿಕ್ಷಣದಲ್ಲಿ ಹಿಂದೆ ಉಳಿದಿಲ್ಲ. ನಟನೆಯ ಜತೆಜತೆಗೆ ಕಳೆದ ವರ್ಷ ಎಂಬಿಬಿಎಸ್ ಪೂರ್ಣಗೊಳಿಸಿರುವ ಅವರು, ಇದೀಗ ಫೆಲ್ಲೋಶಿಪ್ ಇನ್ ಇಂಟರ್ನಲ್ ಮೆಡಿಸಿನ್ ಆ್ಯಂಡ್ ಡರ್ಮಿಟಾಲಜಿ ಮಾಡುತ್ತಿದ್ದಾರೆ. "ಎರಡು ವರ್ಷಗಳ ಕೋರ್ಸ್ ಇದು. ಇನ್ನು ಏಳು ತಿಂಗಳು ಬಾಕಿ ಇದೆ. ನನ್ನ ಸಹೋದರ ಕೂಡ ವೈದ್ಯ. ಪ್ರತಿದಿನ ಡಾನ್ಸ್, ಫೈಟ್ಸ್, ಸ್ಟಂಟ್ ತರಬೇತಿ ಅಥವಾ ಶೂಟಿಂಗ್ ಜತೆಗೆ ಓದಿಗೂ ಸಮಯ ನೀಡುತ್ತಿದ್ದೇನೆ. ಕೋರ್ಸ್ ಪೂರ್ಣಗೊಂಡ ಬಳಿಕ ಸಿನಿಮಾ ಜತೆಗೆ ವೈದ್ಯವೃತ್ತಿಯನ್ನೂ ಮುಂದುವರಿಸುವ ಆಲೋಚನೆ ಇದೆ' ಎನ್ನುತ್ತಾರೆ.