ಬೆಂಗಳೂರು: ವಿಷ್ಣುವರ್ಧನ್ ಅಭಿನಯದ ‘ಬಂಧನ’, ಚಂದನವನದ ಕ್ಲಾಸಿಕ್ ಸಿನಿಮಾಗಳಲ್ಲೊಂದು. 1984ರಲ್ಲಿ ಬಿಡುಗಡೆಯಾದ ಈ ಚಿತ್ರ ಕನ್ನಡಿಗರ ಮನದಲ್ಲಿ ಇಂದಿಗೂ ಹಚ್ಚಹಸಿರು. ಈಗ ಈ ಸಿನಿಮಾದ ಮುಂದುವರಿದ ಭಾಗ ಬರುತ್ತಿದೆ ಎಂದರೆ ನೀವು ನಂಬಲೇಬೇಕು! 37 ವರ್ಷಗಳ ಹಿಂದೆ ತೆರೆಕಂಡಿದ್ದ ‘ಬಂಧನ’ ಚಿತ್ರ ಇದೀಗ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಾಗಿ ಮೂಲ ಚಿತ್ರದ ಮುಂದುವರಿದ ಭಾಗವಾಗುತ್ತಿದೆ. ಎಸ್.ವಿ ರಾಜೇಂದ್ರ ಸಿಂಗ್ ಬಾಬು ಸೀಕ್ವೆಲ್ಗೂ ನಿರ್ದೇಶನ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ವಿಶೇಷ ಎಂಬಂತೆ ಅವರ ಪುತ್ರ ಆದಿತ್ಯ ‘ಬಂಧನ 2’ ಚಿತ್ರದಲ್ಲಿ ನಾಯಕನಾಗಿರಲಿದ್ದಾರೆ.
‘ಬಂಧನ’ನ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಪತಿಯಿಂದ ಡಿವೋರ್ಸ್ ಪಡೆದ ನಂದಿನಿ, ಮಗುವನ್ನು ಪಡೆದು ತೆರಳುತ್ತಾರೆ. ಅದರ ಮುಂದುವರಿದ ಕಥೆಯನ್ನು ಸೀಕ್ವೆಲ್ನಲ್ಲಿ ಹೇಳಲಿದ್ದಾರೆ ನಿರ್ದೇಶಕರು. ನಿರ್ವಣದ ಜತೆಗೆ ಛಾಯಾಗ್ರಾಹಕರಾಗಿಯೂ ಅಣಜಿ ನಾಗರಾಜ್ ಕ್ಯಾಮರಾ ಹಿಡಿಯಲಿದ್ದಾರೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಅವರು, ‘ಈ ಹಿಂದೆಯೇ ಚಿತ್ರ ಘೋಷಣೆ ಆಗಬೇಕಿತ್ತು. ಇದೀಗ ಕಾಲ ಪಕ್ವವಾಗಿದೆ. ವಿಷ್ಣುವರ್ಧನ್ ಜನ್ಮದಿನಕ್ಕೆ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಅ. 22ಕ್ಕೆ ರಾಜೇಂದ್ರ ಸಿಂಗ್ ಬಾಬು ಅವರ ಜನ್ಮ ದಿನ. ಅಂದು ಚಿತ್ರ ಸೆಟ್ಟೇರಲಿದೆ. ಈಗಾಗಲೇ ಬಹುತೇಕ ಸ್ಕ್ರಿಪ್ಟಿಂಗ್ ಕೆಲಸವೂ ಮುಗಿದಿದೆ’ ಎನ್ನುತ್ತಾರೆ. ಎಂದಿನಂತೆ ಸುಹಾಸಿನಿ ಮತ್ತು ಜೈ ಜಗದೀಶ್ ಮುಂದುವರಿದರೆ, ಸುಹಾಸಿನಿ ಮಗನಾಗಿ ಆದಿತ್ಯ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಇಬ್ಬರು ನಾಯಕಿಯರು ಈ ಚಿತ್ರದಲ್ಲಿರಲಿದ್ದಾರೆ. ತಾಂತ್ರಿಕ ವರ್ಗ ಮತ್ತು ಪಾತ್ರವರ್ಗದ ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದೆ.