ಸಿನಿವಾಣಿ

ಅವರು ಕೊಡುವ ಚಾಕೋಲೆಟ್​​ ತಿನ್ನಲು ಸಹ ಭಯಪಡ್ತಾರೆ! ನಟಿ ರೀಮಾ ಮನೆಯ ರಹಸ್ಯ ಬಿಚ್ಚಿಟ್ಟ ಸುಚಿತ್ರಾ

ಚೆನ್ನೈ: ಒಂದು ಕಾಲದಲ್ಲಿ ಸೆಲೆಬ್ರಿಟಿಗಳ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಾಲಿವುಡ್​ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದ್ದ ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್ ಇದೀಗ ಮತ್ತೆ ಕ್ಯಾಮೆರಾ ಮುಂದೆ ಬಂದಿದ್ದು, ತನ್ನ ಗಂಭೀರ ಆರೋಪಗಳಿಂದ ಮತ್ತೆ ಭಾರಿ ಸುದ್ದಿಯಾಗಿದ್ದಾರೆ.

ಮಲಯಾಳಂ ನಟಿ ರೀಮಾ ಕಲ್ಲಿಂಗಲ್ ಮತ್ತು ನಿರ್ದೇಶಕ ಆಶಿಕ್ ಅಬು ಅವರ ವಿರುದ್ಧ ಗಾಯಕಿ ಸುಚಿತ್ರಾ ಗಂಭೀರ ಆರೋಪ ಮಾಡಿದ್ದಾರೆ. ರಿಮಾ ಅವರ ಮನೆಯಲ್ಲಿ ಡ್ರಗ್ಸ್​ ಪಾರ್ಟಿಗಳು ನಡೆಯುತ್ತವೆ ಮತ್ತು ಅಲ್ಲಿ ಹುಡುಗಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ಸುಚಿತ್ರಾ ಆಪಾದನೆ ಮಾಡಿದ್ದಾರೆ. ತಮಿಳು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಮಾ ಸಮಿತಿ ವರದಿಯ ಬಗ್ಗೆ ಮಾತನಾಡುವಾಗ ಈ ವಿಚಾರವನ್ನು ಸುಚಿತ್ರಾ ಬಹಿರಂಗಪಡಿಸಿದ್ದಾರೆ.

ಡ್ರಗ್ಸ್​​ ಪಾರ್ಟಿಗಳಿಂದಾಗಿಯೇ ನಟಿ ರೀಮಾ ವೃತ್ತಿಜೀವನವು ನಾಶವಾಯಿತು. ಕೊಚ್ಚಿಯಲ್ಲಿ ನಡೆದ ಎಲ್ಲ ಪಾರ್ಟಿಗಳು ಯಾರ ಮನೆಯಲ್ಲಿ ನಡೆದಿವೆ? ಇಂತಹ ರೀಮಾ ಇದೀಗ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದಾರಾ? ಆಕೆ ಎಷ್ಟು ಹುಡುಗಿಯರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿದ್ದಾರೆ ಗೊತ್ತಾ ಎಂದು ಸುಚಿತ್ರಾ ವಾಗ್ದಾಳಿ ನಡೆಸಿದ್ದಾರೆ.

ಅನೇಕ ಬಡ ಹುಡುಗಿಯರು ರೀಮಾ ಮನೆಯ ಪಾರ್ಟಿಗಳಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ರೀಮಾ ನಡೆಸುವ ಪಾರ್ಟಿಗಳಲ್ಲಿ ಭಾಗಿಯಾದ ಮಲಯಾಳಂ ಸಂಗೀತ ನಿರ್ದೇಶಕರು ಈ ವಿಚಾರವನ್ನು ತನ್ನ ಬಳಿ ಹಂಚಿಕೊಂಡಿದ್ದಾರೆ. ಆ ಪಾರ್ಟಿಯಲ್ಲಿ ಒಂದೇ ಒಂದು ಚಾಕಲೇಟ್ ತಿನ್ನಲು ಭಯವಾಗುತ್ತಿದೆ ಎಂದು ಅನೇಕರು ಹೇಳಿದ್ದಾರೆ.

ಯಾರು ಈ ರೀಮಾ ಕಲ್ಲಿಂಗಲ್​?

ನಟಿ ರೀಮಾ, ರಿತು (2009) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಮಲಯಾಳಂ ನಟಿ ಮತ್ತು ಚಲನಚಿತ್ರ ನಿರ್ಮಾಪಕಿ. 22 ಫೀಮೇಲ್ ಕೊಟ್ಟಾಯಂ, ಆಯಲುಂ ನಾನುಂ ತಮ್ಮಿಲ್ ಮತ್ತು ರಾಣಿ ಪದ್ಮಿನಿಯಂತಹ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 15 ವರ್ಷಗಳ ಕಾಲ ತನ್ನ ವೃತ್ತಿಜೀವನದಲ್ಲಿ, ಅವರು ಸುಮಾರು 35 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ರೀಮಾ ಪ್ರಸ್ತುತ ವುಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC) ಸದಸ್ಯೆಯಾಗಿ ತಮ್ಮ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ. ಈ ಸಂಸ್ಥೆಯು ಮಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಕೆಲಸದ ಪರಿಸ್ಥಿತಿಗಳನ್ನು ಮತ್ತು ಹೇಮಾ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಹಿಂದಿನ ಕಾರಣವನ್ನು ಬಹಿರಂಗಪಡಿಸಲು ಸಹಾಯ ಮಾಡಿತು.

ಇದೀಗ ಇದೇ ರೀಮಾ ವಿರುದ್ಧ ಗಾಯಕಿ ಸುಚಿತ್ರಾ ಗಂಭೀರ ಆರೋಪ ಮಾಡಿರುವುದು ಮಲಯಾಳಂ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. (ಏಜೆನ್ಸೀಸ್​)