ಬೆಂಗಳೂರು: ‘ಜಗತ್ತು ತುಂಬ ವೇಗವಾಗಿ ಹೋಗುತ್ತಿತ್ತು. ಅದರ ಜತೆ ಎಲ್ಲರೂ ಕತ್ತೆ ಥರ ಓಡುತ್ತಿದ್ದೇವೆ. ಇದೀಗ ಕರೊನಾದಿಂದಾಗಿ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ಲಕ್ಷಾಂತರ ಜನರು ಸಾಯುತ್ತಿದ್ದಾರೆ. ಪ್ರಕರಣಗಳೂ ದಿನೇದಿನೆ ಹೆಚ್ಚಾಗುತ್ತಿವೆ. ಭಯವೂ ಹೆಚ್ಚಾಗುತ್ತಿದೆ. ಹಾಗಾಗಿ ಎಲ್ಲವೂ ನಮ್ಮ ಕೈಯಲ್ಲೇ ಇದೆ, ಮನೆಯಲ್ಲೇ ಇರಿ’ ಎನ್ನುವ ನಟಿ ಅದಿತಿ ಪ್ರಭುದೇವ, ಸದ್ಯ ಸ್ಟೇ ಹೋಮ್ ಮಂತ್ರ ಪಠಿಸುತ್ತಿದ್ದಾರೆ. ಮನೆಯಲ್ಲಿಯೇ ಕುಟುಂಬದ ಜತೆ ಕಾಲಕಳೆಯುತ್ತಿದ್ದಾರೆ. ಸಿನಿಮಾ ಶೂಟಿಂಗ್ ಬದಿಗಿರಿಸಿ, ಕ್ವಾರಂಟೈನ್ ಮೂಡ್ನಲ್ಲಿದ್ದಾರೆ. ಹಾಗಾದರೆ ಅವರ ಆ ಕರೊನಾ ದಿನಗಳು ಹೇಗಿವೆ ಅದನ್ನು ಸ್ವತಃ ಅವರೇ ವಿವರಿಸಿದ್ದಾರೆ.
‘ಕುಟುಂಬದ ಜತೆಗೆ ಇರುವುದರಿಂದ ನನಗೆ ಸದ್ಯಕ್ಕೆ ಅಂಥ ಬದಲಾವಣೆ ಅಂತ ಅನಿಸುತ್ತಿಲ್ಲ. ಈ ಟೈಮ್ಲ್ಲಿ ನನಗೆ ನನ್ನ ಶಾಲಾ ದಿನಗಳು ನೆನಪಿಗೆ ಬರುತ್ತಿವೆ. ಬೆಳಗ್ಗೆ ಒಂದು ಗಂಟೆ ಯೋಗ, ಆಮೇಲೆ ಅರ್ಧಗಂಟೆ ಬ್ರೇಕ್ಫಾಸ್ಟ್, ಅಮ್ಮ ಅಡುಗೆ ಮಾಡಿದರೆ ನಾನು ಮನೆ ಕ್ಲೀನಿಂಗ್ ಮಾಡುತ್ತೇನೆ. ಆಮೇಲೆ ಊಟ ಬಳಿಕ ಒಂದು ಗಂಟೆ ನಿದ್ದೆ. ಓದುವ ಹವ್ಯಾಸ ಕಮ್ಮಿ ಇತ್ತು. ಹಾಗಾಗಿ ರಾಮಾಯಣ ಮತ್ತು ಮಹಾಭಾರತ ಓದಿನಲ್ಲಿ ತೊಡಗಿಸಿಕೊಂಡಿದ್ದೇನೆ. ಸಿನಿಮಾ ಶೂಟಿಂಗ್ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಿಂದಿ ಕಲಿಯುತ್ತಿದ್ದೇನೆ. ಹಿಂದಿಯ ಹಳೇ ಸೀರಿಯಲ್ಗಳನ್ನು ನೋಡುತ್ತಿದ್ದೇನೆ. ಇದೆಲ್ಲ ಮುಗಿದ ಮೇಲೆ ಮನೆ ಸುತ್ತಮುತ್ತ 30-40 ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತೇವೆ’ ಎಂದು ದಿನದ ಪಟ್ಟಿಯನ್ನು ವಿವರಿಸುತ್ತಾರೆ ಅದಿತಿ.
ವಿಜಯ್ಪ್ರಸಾದ್ ನಿರ್ದೇಶನದ ‘ತೋತಾಪುರಿ’ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಇನ್ನೊಂದು ಹಾಡು ಮುಗಿದರೆ ಆ ಚಿತ್ರದ ಕೆಲಸ ಮುಗಿದಂತೆ. ಅದರ ಜತೆಗೆ ಯೋಗಿ ಅವರ ಜತೆಗಿನ ‘ಒಂಭತ್ತನೇ ದಿಕ್ಕು’ ಬಿಡುಗಡೆಗೆ ರೆಡಿಯಾಗಿದೆ. ಎಂ.ಜಿ. ಶ್ರೀನಿವಾಸ್ ಜತೆಗೆ ‘ಓಲ್ಡ್ ಮಾಂಕ್’ ಸಿನಿಮಾ ಕೆಲಸಗಳು ನಡೆಯಬೇಕಿದೆ.
ಓದುವಿಕೆಗೆ ಮತ್ತು ಯೋಗಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದೇನೆ. ಧ್ಯಾನ ಮಾಡುತ್ತಿದ್ದೇನೆ. ಶೂಟಿಂಗ್ ಸಮಯದಲ್ಲಿ ಈ ರೀತಿ ಸಮಯ ಸಿಗುವುದಿಲ್ಲ. ಈಗ ಸಿನಿಮಾ ಟೆನ್ಷನ್ ಇಲ್ಲ. ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದೇನೆ. | ಅದಿತಿ ಪ್ರಭುದೇವ ನಟಿ