ಸಿನಿವಾಣಿ

'ಪದವಿಪೂರ್ವ'ಕ್ಕೀಗ ಅದಿತಿಯೂ ಅತಿಥಿ; 'ಭಟ್ಟ'ರ ಸಿನಿಮಾದಲ್ಲಿ ಹಲವರಿಗೆ ಅಭಿನಯ 'ಯೋಗ'

ಬೆಂಗಳೂರು: ಯೋಗರಾಜ್​ ಸಿನಿಮಾಸ್​ ಹಾಗೂ ರವಿ ಶಾಮನೂರ್ ಫಿಲ್ಮ್ಸ್​ ಜಂಟಿಯಾಗಿ ನಿರ್ಮಿಸುತ್ತಿರುವ, ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ 'ಪದವಿಪೂರ್ವ' ಚಿತ್ರಕ್ಕೀಗ ಒಬ್ಬೊಬ್ಬರೇ ಅತಿಥಿಯಾಗಿ ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರಭು ಮುಂಡ್ಕೂರ್ ಹಾಗೂ ಶ್ರೀಮಹದೇವ್​ ಅವರು ಅತಿಥಿ ಪಾತ್ರಗಳಲ್ಲಿ ಈ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ಇದೀಗ ನಟಿ ಅದಿತಿ ಪ್ರಭುದೇವ ಕೂಡ ಪದವಿಪೂರ್ವಕ್ಕೆ ಅತಿಥಿಯಾಗಿ ಸೇರಿಕೊಂಡಿದ್ದಾರೆ. ಈ ಮೂಲಕ 'ಭಟ್ಟ'ರ ಸಿನಿಮಾದಲ್ಲಿ ಅಭಿನಯಿಸಲು ಹಲವು ಕಲಾವಿದರಿಗೆ 'ಯೋಗ' ಸಿಕ್ಕಂತಾಗಿದೆ.

ಈ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯವಾದ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದಾರೆ. ಚಿತ್ರದ ನಾಲ್ಕನೇ ಹಂತದ ಶೂಟಿಂಗ್​ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮುಗಿಸಿರುವ ತಂಡ ಐದನೇ ಹಂತದ ಚಿತ್ರೀಕರಣಕ್ಕಾಗಿ ಮಂಗಳೂರಿನಲ್ಲಿ ಬೀಡು ಬಿಟ್ಟಿದೆ. ಬೀಚ್ ಸೇರಿ ಮಂಗಳೂರಿನ ಸುತ್ತಮುತ್ತ ಇರುವ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಮೈ ಜುಮ್ ಎನಿಸುವಂತಹ ಪ್ರಮುಖವಾದ ಆ್ಯಕ್ಷನ್ ಸನ್ನಿವೇಶವೊಂದಕ್ಕಾಗಿ ನಾಯಕ ಪೃಥ್ವಿ ಹಾಗೂ ಚಿತ್ರದ ಮತ್ತೊಬ್ಬ ಪ್ರಮುಖ ಪಾತ್ರಧಾರಿ ವಿಜಯ್ ಕಿರಣ್ ಡ್ಯೂಪ್ ಇಲ್ಲದೆ ನಟಿಸಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಹೊಸಬರ ದಂಡೇ ಇರುವ ಈ ಚಿತ್ರಕ್ಕೆ ಯುವ ಪ್ರತಿಭೆ ಪೃಥ್ವಿ ಶಾಮನೂರು ನಾಯಕನಾದರೆ, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತಕ್ಕೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮರಾ ಹಾಗು ಮಧು ತುಂಬಕೆರೆಯ ಸಂಕಲನ ಈ ಚಿತ್ರಕ್ಕಿದೆ.