ಸಿನಿವಾಣಿ

ನಾನವಳಲ್ಲ, ನಾನವಳಲ್ಲ...; ಆನದಲ್ಲಿರುವ ಅದಿತಿಯೇ ಬೇರೆ...

ಬೆಂಗಳೂರು: ‘ಲಾಕ್​ಡೌನ್ ಬೇರೆ ಶುರುವಾಗಿತ್ತು. ಒಪ್ಪಿಕೊಂಡಿದ್ದ ಸಿನಿಮಾಗಳ ಕೆಲಸ ಯಾವಾಗ ಶುರು ಎಂಬುದೇ ಗೊತ್ತಿರಲಿಲ್ಲ. ಎಲ್ಲರಂತೆ ನಾನೂ ಕೆಲಸವಿಲ್ಲದೆ ಖಾಲಿ ಕುಳಿತಿದ್ದೆ. ಆಗ ಸಿಕ್ಕ ಪ್ರಾಜೆಕ್ಟ್ ‘ಆನ’... ಹೀಗೆ ಹೇಳಿಕೊಂಡಿದ್ದು ನಟಿ ಅದಿತಿ ಪ್ರಭುದೇವ. ‘ಸೂಪರ್ ಹೀರೋ’ ಪರಿಕಲ್ಪನೆಯ ‘ಆನ’ ಸಿನಿಮಾ ಮೂಲಕ ಹಿಂದೆಂದೂ ಕಾಣಿಸದ ಪಾತ್ರವೊಂದಕ್ಕೆ ಅದಿತಿ ಮುಖವೊಡ್ಡಿದ್ದಾರೆ. ಆ ಚಿತ್ರದ ಝುಲಕ್ ಹೇಗಿದೆ ಎಂಬುದಕ್ಕೆ ಟೀಸರ್ ಮೂಲಕ ಸಾಕ್ಷ್ಯ ಸಿಕ್ಕಿದೆ. ಸದ್ಯ ಚಿತ್ರದ ಪೋಸ್ಟ್​ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಮೇ ಮೊದಲ ವಾರದಲ್ಲಿ ತೆರೆಗೆ ಬರುವ ಬಗ್ಗೆ ಚಿತ್ರತಂಡ ಸುಳಿವು ನೀಡಿದೆ.

ಯೂಟ್ಯೂಬ್​​ನಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ‘ಆನ’ ಟೀಸರ್​ಗೆ ಕೇವಲ ಕನ್ನಡಿಗರನ್ನಷ್ಟೇ ಸೆಳೆದಿಲ್ಲ. ಪಕ್ಕದ ತಮಿಳು, ತೆಲುಗು, ಹಿಂದಿ ಚಿತ್ರರಂಗದವರ ಕಣ್ಣಿಗೆ ಬಿದ್ದಿದೆ. ಸಾಕಷ್ಟು ಮಂದಿ ಕರೆ ಮಾಡಿ ಚಿತ್ರತಂಡದವರಿಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಹಾಗಾಗಿ ಚಿತ್ರದ ಮೇಲೆ ಚಿತ್ರತಂಡಕ್ಕೆ ಭಯ ಮತ್ತು ಜವಾಬ್ದಾರಿ ಹೆಚ್ಚಾಗಿದೆ. ಅದನ್ನು ಸ್ವತಃ ನಿದೇಶಕ ಮನೋಜ್ ನಡಲುಮನೆ ಹೇಳಿಕೊಂಡಿದ್ದಾರೆ. ‘ಇದೊಂದು ಡಾರ್ಕ್ ಫ್ಯಾಂಟಸಿ ಸಿನಿಮಾ. ಮೊದಲ ಪ್ರಯತ್ನಕ್ಕೆ ಕೇವಲ ಕನ್ನಡ ಅಷ್ಟೇ ಅಲ್ಲ, ಪರಭಾಷಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾರ್ಯಾರಿಂದಲೋ ನಂಬರ್ ಪಡೆದು ಕರೆ ಮಾಡಿ ಟೀಸರ್ ಬಗ್ಗೆ ಮಾತನಾಡುತ್ತಿದ್ದಾರೆ.

ಆದರೆ, ಕನ್ನಡದವರಿಂದ ಅಷ್ಟೊಂದು ಪ್ರೋತ್ಸಾಹದ ಮಾತುಗಳು ಸಿಕ್ಕಿಲ್ಲ’ ಎಂಬುದು ಅವರ ಮಾತು. ಇನ್ನು, ನಾಯಕಿ ಅದಿತಿ ಕಥೆ ಕೇಳಿದ್ದೇ ತಡ, ಬೇರೆನನ್ನೂ ಯೋಚಿಸದೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ‘ಲಾಕ್​ಡೌನ್ ಹೊತ್ತಲ್ಲಿ ಹೊಸತಂಡ ಸಂರ್ಪಸಿ ಕಥೆ ಹೇಳಿತು. ಕಥೆ ತುಂಬ ಕುತೂಹಲ ಆಗಿದ್ದರಿಂದ ಒಪ್ಪಿಕೊಂಡು, ಬಹುತೇಕ ರಾತ್ರಿವೇಳೆ ಸಿನಿಮಾ ಶೂಟಿಂಗ್ ಮಾಡಿದ್ದೇವೆ. ಇಲ್ಲಿಯವರೆಗೆ ನಾನಲ್ಲದ ಅದಿತಿ ಈ ಸಿನಿಮಾದಲ್ಲಿದ್ದಾಳೆ. ಒಂದು ಹೊಸ ಪ್ರಯತ್ನ ನಮ್ಮೆಲ್ಲರಿಂದ ಆಗಿದೆ’ ಎನ್ನುತ್ತಾರೆ ಅದಿತಿ.