ಸಿನಿವಾಣಿ

ಮತ್ತೆ ಗ್ಯಾಂಗ್​ಸ್ಟರ್ ಆದ ಆದಿತ್ಯ; ಜಾನಪದ ಕ್ರೀಡೆ ಕುರಿತಾದ ಸಿನಿಮಾ

Webdesk - Ravikanth

‘ನಾನು ಅಂಡರ್​ವರ್ಲ್ಡ್​ನಿಂದ ದೂರ ಹೋದರೂ, ಅಂಡರ್​ವರ್ಲ್ಡ್ ನನ್ನ ಹಿಂದೆ ಬರುವುದು ನಿಲ್ಲುತ್ತಿಲ್ಲ ...’

ತಮ್ಮ ಮಾತಿಗೆ ತಾವೇ ನಕ್ಕರು ಆದಿತ್ಯ. ‘ಡೆಡ್ಲಿ ಸೋಮ’ದಿಂದ ಅವರು ಅದೆಷ್ಟು ಭೂಗತಲೋಕದ ಕುರಿತಾದ ಚಿತ್ರಗಳಲ್ಲಿ ನಟಿಸಿದ್ದಾರೋ? ಈಗ ‘ವೀರ ಕಂಬಳ’ ಎಂಬ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಹೆಸರು ಕೇಳಿದರೆ, ಇದರಲ್ಲಾದರೂ ಅವರಿಗೆ ಬೇರೆ ತರಹದ ಪಾತ್ರ ಸಿಕ್ಕಿರಬಹುದು ಎಂದನಿಸಬಹುದು. ಆದರೆ, ಇಲ್ಲೂ ಅವರಿಗೆ ಗ್ಯಾಂಗ್​ಸ್ಟರ್ ಪಾತ್ರ ಸಿಕ್ಕಿದೆ.

ಈ ಕುರಿತು ಮಾತನಾಡುವ ಅವರು, ‘ನಾನು ಇಲ್ಲಿ ಗ್ಯಾಂಗ್​ಸ್ಟರ್ ಪಾತ್ರ ಮಾಡುತ್ತಿದ್ದೇನೆ. ಹೆಸರು ಹೇಳಲು ಅನುಮತಿ ಇಲ್ಲ. ನನ್ನ ಗೆಟಪ್ ನೋಡಿದಾಗ ನಾನು ಯಾರ ಪಾತ್ರ ಮಾಡಿದ್ದೇನೆ ಎಂದು ಊಹೆ ಮಾಡಬಹುದು. ಆದರೆ, ಬಹಳ ಮುಖ್ಯವಾದ ಪಾತ್ರ. ಫೋಟೋ ನೋಡಿದವರು ನಿಜಕ್ಕೂ ಇದು ನೀವೇನಾ? ಅಂತ ಕೇಳಿದ್ದಾರೆ. ಅಷ್ಟು ಹೋಲಿಕೆ ಇದೆ. ನಾನು ಮೊದಲ ದಿನ ಚಿತ್ರೀಕರಣಕ್ಕೆ ಹೋಗಿ ಗೆಟಪ್ ಹಾಕಿಕೊಂಡಾಗ, ಎಲ್ಲರೂ ಆಶ್ಚರ್ಯಪಟ್ಟರು. ಆ ಪಾತ್ರ ಮಾಡಬೇಕು ಅಂತ ಆಸೆ ಇತ್ತು. ಅದು ನನಸಾಗಿದೆ’ ಎಂದು ಹೇಳಿದರು. ಯಾರ ಪಾತ್ರ ಮಾಡುತ್ತಿದ್ದೇನೆ ಎಂದು ಆದಿತ್ಯ ಮುಚ್ಚಿಟ್ಟರೂ, ಈ ಚಿತ್ರದಲ್ಲಿ ಅವರು ಮುತ್ತಪ್ಪ ರೈ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

‘ಕಂಬಳ’ ಚಿತ್ರವನ್ನು ನಿರ್ದೇಶಿಸಿರುವವರು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು. ನಿರ್ಮಾಣ ಅರುಣ್ ರೈ ತೋಡಾರ್ ಅವರದ್ದು. ಇನ್ನು, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.ಈ ಚಿತ್ರದ ಕುರಿತು ಮಾತನಾಡಿದ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ‘ವಾರಪತ್ರಿಕೆಯೊಂದರಲ್ಲಿ ಕಂಬಳದ ಕುರಿತಾಗಿ ಪ್ರಕಟವಾಗುತ್ತಿದ್ದ ಬರಹಗಳನ್ನು ಓದುತ್ತಿದ್ದೆ. ಅದರ ಮೇಲೆ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಅದರಂತೆ ಅರುಣ್, ವಿಜಯ್ಕುಮಾರ್ ಸೇರಿಕೊಂಡರು. ಮೂಡುಬಿದಿರೆ ಬಳಿ ದೊಡ್ಡ ಕಂಬಳದ ಮೈದಾನ ಸಿದ್ಧವಾಯಿತು. 20 ಜೊತೆ ಕೋಣ. ಒಂದು ಕೋಣ ನೋಡಿಕೊಳ್ಳಲು ನಾಲ್ಕು ಜನ. ಸಹ ಕಲಾವಿದರು, ತಂಡದವರು ಅಂತ ಪ್ರತಿ ದಿನ 500ಕ್ಕೂ ಹೆಚ್ಚು ಜನ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದರು. ಕೋಣಗಳ ಮೂಡ್ ಒಂದೇ ತರಹ ಇರುವುದಿಲ್ಲ. ಅದನ್ನೆಲ್ಲ ನೋಡಿಕೊಂಡು ಚಿತ್ರೀಕರಣ ಮಾಡಬೇಕಿತ್ತು. ಆದಿತ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾಗಿರುವ ಶ್ರೀನಿವಾಸ ಗೌಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎನ್ನುತ್ತಾರೆ. ‘ಕಂಬಳ’ದಲ್ಲಿ ರಾಧಿಕಾ ನಾರಾಯಣ್ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿದ್ದಾರೆ.