ಸಿನಿವಾಣಿ

ವಯಸ್ಸು 38 ಆದ್ರೂ ಇನ್ನೂ ಯಾಕೆ ಮದ್ವೆಯಾಗಿಲ್ಲ? ವರು ಕೊಟ್ಟ ಉತ್ತರ ಕೇಳಿದ್ರೆ ಹುಬ್ಬೇರಿಸ್ತೀರಿ!

ಹೈದರಾಬಾದ್​: ಕಾಲಿವುಡ್​ ಹಿರಿಯ ನಟ ಶರತ್​ಕುಮಾರ್​ ಅವರ ಹಿರಿಯ ಪುತ್ರಿ ವರಲಕ್ಷ್ಮೀ ಶರತ್‌ಕುಮಾರ್ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ. ಆಕೆಯ ಚೊಚ್ಚಲ ‘ಪೋಡಾ ಪೋಡಿ’ಯಿಂದ ವಿಜಯ್ ಸೇತುಪತಿಯ ‘ವಿಕ್ರಮ್ ವೇದ’ ಮತ್ತು ವಿಜಯ್ ಅವರ ‘ಸರ್ಕಾರ್’ ವರೆಗೂ ಅನೇಕ ಚಿತ್ರಗಳಲ್ಲಿನ ಅವರ ಅಭಿನಯವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ. ಪೂರ್ಣ ಪ್ರಮಾಣದ ನಾಯಕಿ ಅಲ್ಲದಿದ್ದರೂ, ಖಳನಾಯಕಿ ಮತ್ತು ಪೋಷಕ ಪಾತ್ರದಿಂದಲೇ ವರು ತುಂಬಾ ಹೆಸರು ಮಾಡಿದ್ದಾರೆ. ಕೆಲ ಚಿತ್ರಗಳಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ.

ಕ್ರ್ಯಾಕ್’ ಮತ್ತು ‘ನಾಂದಿ’ಯಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿ ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿರುವ ವರು ತೆಲುಗು ಚಿತ್ರರಂಗದಲ್ಲಿ ಉತ್ತಮ ಯಶಸ್ಸನ್ನು ಕಂಡಿದ್ದಾರೆ. ಅಲ್ಲದೆ, ಟಾಲಿವುಡ್​ನಿಂದ ಸಿಕ್ಕಾಪಟ್ಟೆ ಆಫರ್‌ಗಳು ಬರುತ್ತಿವೆ ಮತ್ತು ಪ್ರಸ್ತುತ ಸಮಂತಾ ನಟನೆಯ ‘ಯಶೋಧಾ’, ಸಂದೀಪ್ ಕಿಶನ್ ಅವರ ‘ಮೈಕೆಲ್’, ‘ಹನುಮಾನ್’ ಮತ್ತು ‘ಆದ್ಯ’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹನುಮಾನ್ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಕಲೆಕ್ಸನ್​ನೊಂದಿಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.​ ಇದರ ನಡುವೆ ವರು ಸಿನಿಮಾ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಮದುವೆ ಕುರಿತು ವರಲಕ್ಷ್ಮೀಯವರನ್ನು ಪ್ರಶ್ನೆ ಮಾಡಲಾಯಿತು. ವಯಸ್ಸು ಮೂವತ್ತೆಂಟಾದರೂ ಇನ್ನೂ ಯಾಕೆ ಮದುವೆ ಆಗಿಲ್ಲ ಎಂದು ಪ್ರಶ್ನೆ ಮಾಡಲಾಯಿತು. ಈ ಪ್ರಶ್ನೆಗೆ ವರು ಬೋಲ್ಡ್​ ಆಗಿಯೇ ಉತ್ತರಿಸಿದ್ದಾರೆ.

ಯಾವಾಗ ನಡೆಯಬೇಕು ಆಗ ಮದುವೆ ನಡೆಯುತ್ತದೆ. ಮದುವೆ ಎಂಬುದು ನಮ್ಮ ಜೀವನದ ಭಾಗವಾಗಿದೆ. ಆದರೆ, ಅದೇ ಗುರಿಯಲ್ಲ. ನಾನು ಮದುವೆ ವಿರೋಧಿಯಲ್ಲ. 18 ವರ್ಷಗಳ ಹಿಂದೆಯೇ ನಾನು ಮನೆಯಲ್ಲಿ ನನ್ನ ಮದುವೆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದೇನೆ. ಮದುವೆ ನನಗೆ ಮುಖ್ಯವಲ್ಲ. ಮದುವೆ ಆಗುವುದು ಒಳ್ಳೆಯದೆ. ಆದರೆ, ಅನೇಕರು ಮದುವೆ ಆಗದೆಯೂ ಹಾಗೇ ಇದಾರೆ. ನನ್ನ ಸ್ನೇಹಿತೆ ತ್ರಿಷಾ ಕೂಡ ಇನ್ನೂ ಮದುವೆ ಆಗಿಲ್ಲ. ಹೀಗಾಗಿ ನನಗೆ ಮದುವೆಯೇ ಮುಖ್ಯವಲ್ಲ ಎಂದು ವರು ಸ್ಪಷ್ಟನೆ ನೀಡಿದರು.

ಅಂದಹಾಗೆ ವರು ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಅಲ್ಲದೆ, ಕಿಚ್ಚನ ಮುಂದಿನ ಚಿತ್ರ ಮ್ಯಾಕ್ಸ್​ನಲ್ಲೂ ವರು ನಟಿಸುತ್ತಿರುವುದನ್ನು ಚಿತ್ರತಂಡವೇ ಖಚಿತಪಡಿಸಿದೆ. (ಏಜೆನ್ಸೀಸ್​)