Taapsee Pannu: ಬಾಲಿವುಡ್, ತೆಲುಗು ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ಅನೇಕ ಸಿನಿಪ್ರಿಯರನ್ನು ಮನರಂಜಿಸಿರುವ ನಟಿ ತಾಪ್ಸಿ ಪನ್ನು, ಇಂದಿಗೂ ತಮ್ಮ ಸಿನಿಮಾ, ವೆಬ್ ಸರಣಿಯ ಕೆಲಸಗಳಲ್ಲಿ ಸಖತ್ ಬಿಜಿಯಾಗಿದ್ದಾರೆ. ಇದರ ನಡುವೆಯೇ ಒಂದು ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡಿರುವ ಬೋಲ್ಡ್ ಬ್ಯೂಟಿ, ತಮ್ಮನ್ನು ಅದಾಗಲೇ ಆಯ್ಕೆಯಾಗಿದ್ದ ಸಿನಿಮಾದಿಂದ ಸ್ವತಃ ಹೀರೋನೇ ತೆಗೆದುಹಾಕಿದ ಬಗ್ಗೆ ಶಾಕಿಂಗ್ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ನಯನ್ದೀಪ್ ರಕ್ಷಿತ್ ಜತೆ ಸಂದರ್ಶನದಲ್ಲಿ ಮಾತನಾಡಿದ ತಾಪ್ಸಿ, "ನನ್ನನ್ನು ಒಂದು ಸಿನಿಮಾದ ಪ್ರಾಜೆಕ್ಟ್ನಿಂದ ದಿಢೀರ್ ಕೈಬಿಡಲಾಯಿತು. ಅದು ನಾನು ಡೇಟ್ಸ್ ಕೊಟ್ಟು, ಉಳಿದೆಲ್ಲ ಕೆಲಸಗಳನ್ನು ಒಪ್ಪಿಕೊಂಡ ಬಳಿಕ ನೀವು ಈ ಚಿತ್ರತಂಡದ ಭಾಗವಾಗಿರುವುದಿಲ್ಲ ಎಂದು ಹೇಳಿದರು. ನಾನು ಅದಕ್ಕೆ ಓಕೆ ಅಂದೆ. ಆದ್ರೆ, ಸೂಕ್ತ ಕಾರಣ ಕೊಡಿ ಎಂದು ಪ್ರಶ್ನಿಸಿದೆ. ಇದಕ್ಕೆ ಸಿಕ್ಕಿದ್ದು ಶೂನ್ಯ ಉತ್ತರ ಎಂದರು.
ನಾನು ಒಂದಷ್ಟು ದಿನಗಳ ಕಾಲ ಏನಿರಬಹುದು. ಯಾವ ಕಾರಣಕ್ಕೆ ನನ್ನನ್ನು ಕೈಬಿಟ್ಟಿರಬಹುದು. ಹೀರೋ ಏಕೆ ನನ್ನನ್ನು ತೆಗೆದು ಹಾಕಿದರು. ಅವರಿಗೆ ನನ್ನಿಂದ ಆದ ಸಮಸ್ಯೆ ಆದರೂ ಏನು? ಎಂಬ ಹತ್ತು ಹಲವು ಕಾರಣಗಳು ನನ್ನ ತಲೆಯಲ್ಲಿ ಓಡುತ್ತಲೇ ಇತ್ತು. ತುಂಬ ದಿನಗಳು ಇದೇ ವಿಷಯದ ಬಗ್ಗೆ ನನ್ನಲ್ಲೇ ಕಾರಣಗಳನ್ನು ಹುಡುಕುತ್ತಿದ್ದೆ. ಆಗ ಕೊನೆಗೆ ನನಗೆ ಅಸಲಿ ಕಾರಣ ತಿಳಿದಾಗ ಭಾರಿ ಬೇಸರ ಹಾಗೂ ತೀರ ವಿಚಿತ್ರ ಎನಿಸಿತು ಎಂದಿದ್ದಾರೆ.
ಸಿನಿಮಾದಿಂದ ನನ್ನನ್ನು ಕೈಬಿಡಲು ಅಥವಾ ಇನ್ನೊಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಅವರು ತೆಗೆದುಕೊಂಡ ಕಾರಣ ನಿಜಕ್ಕೂ ಭಾರಿ ಕೆಟ್ಟದಾಗಿತ್ತು. ನನ್ನನ್ನು ಬದಲಾಯಿಸಲು ಹೀರೋ ಕೊಟ್ಟ ಕಾರಣ ಅವರ ಪತ್ನಿಯಂತೆ. ಕಾರಣ, ಹೀರೋ ಅವರ ಹೆಂಡತಿಗೆ ನನ್ನನ್ನು ಕಂಡರೆ ಇಷ್ಟ ಇರಲ್ಲಿಲ್ಲವಂತೆ. ಆಕೆ ನನ್ನನ್ನು ಇಷ್ಟಪಡದಿರಲು ಕಾರಣವೇನು ಎಂಬುದು ನನಗೆ ಗೊತ್ತಿಲ್ಲ. ಅದಕ್ಕೋಸ್ಕರ ನನ್ನನ್ನು ಹೊರಗಿಟ್ಟಿದ್ದು ಅತ್ಯಂತ ಕಳಪೆ ನಿರ್ಧಾರ ಅಂತ ಅನಿಸಿತು ಎಂದು ಹೇಳಿದ್ದಾರೆ. ಅಸಲಿಗೆ, ಇಲ್ಲಿ ತಾಪ್ಸಿ ಯಾವ ಸಿನಿಮಾ, ಆ ನಟ ಯಾರು ಎಂಬುದನ್ನು ಎಲ್ಲಿಯೂ ಉಲ್ಲೇಖಿಸಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).