ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಸಿನಿಮಾ ತಾರೆಯರು ಪ್ರವಾಸಕ್ಕೆ ಹೋದಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಹಾಗೇ ಹೊಸ ಕಾಸ್ಟ್ಯೂಮ್ನಲ್ಲಿ ರೀಲ್ಸ್ ಮಾಡುವುದು ಕೂಡ ಕಾಮನ್. ಅದರ ಜತೆ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಪ್ರದರ್ಶಿಸಿದರೆ ಉತ್ತಮ ಸಮಾಜ, ಪರಿಸರ ನಿರ್ಮಾಣ ಸಾಧ್ಯ ಎನ್ನುತ್ತಾರೆ "ಡ್ರಾಮಾ', "ಯಾರೇ ಕೂಗಾಡಲಿ', "ಲವ್ ಇನ್ ಮಂಡ್ಯ', "ಕೃಷ್ಣ ಟಾಕೀಸ್' ಖ್ಯಾತಿಯ ನಟಿ ಸಿಂಧು ಲೋಕನಾಥ್.
ಬರೀ ಹೇಳುವುದಷ್ಟೇ ಅಲ್ಲ, ಹಾಗೊಂದು ಒಳ್ಳೆ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿ ಕೂಡ ಆಗಿದ್ದಾರೆ. ಹೌದು, ಇತ್ತೀಚೆಗಷ್ಟೆ ಕುಮಟದ ಕಡಲೆ ಬೀಚ್ಗೆ ಪ್ರವಾಸಕ್ಕೆಂದು ತೆರಳಿದ್ದ ಸಿಂಧು, ಅಲ್ಲಿ ಬಿದ್ದಿದ್ದ ಕಸವನ್ನು ನೋಡಿ ಶಾಕ್ ಆಗಿದ್ದಾರೆ. ಹಾಗಂತ ಸುಮ್ಮನೆ ಕೂರದೇ ಎರಡು ದಿನಗಳ ಕಾಲ ಸುಮಾರು ಒಂದು ಕಿಲೋಮೀಟರ್ನಷ್ಟು ದೂರ ಓಡಾಡಿ, ಬೀಚ್ ಸ್ವಚ್ಛಗೊಳಿಸಿದ್ದಾರೆ.
"ನನಗೆ ಗೋಕರ್ಣ ಫೇವರಿಟ್ ಜಾಗ. ಅಲ್ಲಿ ಬೀಚ್ಗೆ ಸೂಯಾಸ್ತ ನೋಡುತ್ತಾ ಕೂರುವುದು ಬಹಳ ಇಷ್ಟ. ಇದೇ ಮೊದಲ ಬಾರಿ ಕಡಲೆ ಬೀಚ್ಗೆ ತೆರಳಿದ್ದೆ. ತುಂಬ ಗಲೀಜಾಗಿರುವುದನ್ನು ನೋಡಿ ಬೇಸರವಾಯಿತು. ಸನ್ಸೆಟ್ ನೋಡುತ್ತಾ ಕ್ಲೀನ್ ಮಾಡತೊಡಗಿದೆ. ನನ್ನ ಜತೆ ನನ್ನ ಸೋದರ ಸಂಬಂಧಿಯೂ ಜತೆಯಾದರು. ಎರಡು ದಿನ ಬೆಳಗ್ಗೆ, ಸಂಜೆ ತಲಾ ಎರಡು ತಾಸು ಬೀಚ್ನ ಸುಮಾರು ಒಂದು ಕಿಲೋಮೀಟರ್ ಓಡಾಡಿ ಇಬ್ಬರೂ ಬಿಯರ್ ಬಾಟಲ್, ಮದ್ಯದ ಪಾಕೆಟ್, ನೀರಿನ ಪ್ಲ್ಯಾಸ್ಟಿಕ್ ಬಾಟಲ್, ಗಾಜಿನ ಬಾಟಲ್ಗಳು, ಚಪ್ಪಲಿ ಸೇರಿ ಸಾಕಷ್ಟು ಕಸ ಸಂಗ್ರಹಿಸಿಟ್ಟೆವು ' ಎಂದು ಹೇಳಿಕೊಳ್ಳುತ್ತಾರೆ ಸಿಂಧು.
"ಪ್ರವಾಸಿಗರಲ್ಲಿ ಸಾಮಾಜಿಕ ಬದ್ಧತೆ ಇದ್ದರೆ ಒಳಿತು' ಎನ್ನುವ ಸಿಂಧು, "ತಾವು ತರುವ ಊಟ, ತಿಂಡಿ, ನೀರು ಸೇವಿಸಿದ ಬಳಿಕ ಖಾಲಿ ಬಾಟಲ್, ಪಾಕೆಟ್ಗಳನ್ನು ಡಸ್ಟ್ಬಿನ್ಗೆ ಹಾಕಬೇಕು ಅಥವಾ ವಾಪಸ್ ಕೊಂಡೊಯ್ಯಬೇಕು. ಬೀಚ್ನಂತಹ ಪ್ರವಾಸಿತಾಣಗಳಾಗಿರಲಿ, ರಸ್ತೆಯೇ ಆಗಿರಲಿ ಎಲ್ಲೆಂದರಲ್ಲಿ ಕಸ ಹಾಕಬಾರದು. ಎಲ್ಲರಲ್ಲೂ ಈ ಜವಾಬ್ದಾರಿ ಮೂಡಬೇಕು. ವಿದೇಶಗಳಿಗೆ ಪ್ರವಾಸಕ್ಕೆ ಹೋಗುವವರು ಅಲ್ಲಿನ ಸ್ವಚ್ಛತೆಯನ್ನು ಹಾಡಿ ಹೊಗಳುತ್ತಾರೆ. ಅದಕ್ಕೆ ಅಲ್ಲಿನ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಮತ್ತು ಜನರ ಜವಾಬ್ದಾರಿ ಕೂಡ ಕಾರಣವಾಗಿರುತ್ತದೆ. ಅದೇ ರೀತಿ ಇಲ್ಲಿನ ಪ್ರವಾಸಿ ತಾಣಗಳಲ್ಲಿ ಡಸ್ಟ್ಬಿನ್ಗಳನ್ನು ಅಳವಡಿಸಬೇಕು. ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ಹಾಕಬೇಕು. ಹಾಗೇ ಸ್ವಚ್ಛತೆಯ ಬಗ್ಗೆ ಸೆಲೆಬ್ರಿಟಿಗಳು ಸಹ ಸಾಮಾಜಿಕ ಸಂದೇಶ ಸಾರುವ ಕೆಲಸ ಮಾಡಿದರೆ, ಹೆಚ್ಚು ಜನರಲ್ಲಿ ಅರಿವು ಮೂಡಿಸಬಹುದು' ಎನ್ನುತ್ತಾರೆ. ಅಂದಹಾಗೆ, ಸದ್ಯ ಚಿತ್ರವೊಂದರ ಮಾತುಕತೆ ನಡೆಸುತ್ತಿರುವ ಸಿಂಧು ಈ ತಿಂಗಳಂತ್ಯಕ್ಕೆ ಒಂದೊಳ್ಳೆ ಸುದ್ದಿ ಕೊಡುತ್ತಾರಂತೆ.