ಸಿನಿವಾಣಿ

ಡಬಲ್ ಸಂಭ್ರಮದಲ್ಲಿ ಶ್ರೀಲೀಲಾ; ತೆಲುಗಿನಲ್ಲಿ 2 ಸಿನಿಮಾಗಳಲ್ಲಿ ಅವಕಾಶ

ಬೆಂಗಳೂರು: ಟಾಲಿವುಡ್​ನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ‘ಪೆಳ್ಳಿ ಸಂದಡಿ 2’ ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರವು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದರೆ, ಆ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಕನ್ನಡದ ನಟಿ ಶ್ರೀಲೀಲಾಗೆ ಕೆಂಪು ಹಾಸಿನ ಸ್ವಾಗತ ಸಿಕ್ಕಿತ್ತು. ಅದರಂತೆ ಇದೀಗ ಎರಡ್ಮೂರು ತೆಲುಗು ಸಿನಿಮಾಗಳಲ್ಲಿ ಅವರು ನಟಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರಂತೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ಕನ್ನಡಕ್ಕಿಂತ ತೆಲುಗಿನಲ್ಲಿಯೇ ಸಕ್ರಿಯರಾಗುತ್ತಿದ್ದಾರೆ ಕನ್ನಡದ ನಟಿಯರು. ಈಗಾಗಲೇ ರಶ್ಮಿಕಾ ಮಂದಣ್ಣ, ನಭಾ ನಟೇಶ್ ಸ್ಯಾಂಡಲ್​ವುಡ್​ನತ್ತ ಮುಖ ಮಾಡದೆ, ಅಲ್ಲಿಯೇ ಬಿಜಿಯಾಗಿದ್ದಾರೆ. ಇದೀಗ ಶ್ರೀಲೀಲಾ ಸಹ ಕನ್ನಡ ಸಿನಿಮಾಗಳ ಜತೆಗೆ ತೆಲುಗಿನಲ್ಲಿಯೂ ಒಳ್ಳೊಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.

ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಸಿತಾರಾ ಎಂಟರ್​ಟೈನ್​ವೆುಂಟ್ ತನ್ನ ಮುಂದಿನ ಎರಡು ಚಿತ್ರಗಳಿಗೆ ನಾಯಕಿಯಾಗಿ ಶ್ರೀಲೀಲಾ ಅವರನ್ನು ಆಯ್ಕೆ ಮಾಡಿಕೊಂಡಿದೆಯಂತೆ. ವರುಣ್ ತೇಜ, ನವೀನ್ ಪೊಲಿಶೆಟ್ಟಿ ನಾಯಕರಾಗಿ ನಟಿಸಲಿರುವ ಈ ಚಿತ್ರಗಳನ್ನು ಹೊಸಬರು ನಿರ್ದೇಶಿಸಲಿದ್ದಾರಂತೆ. ಅಷ್ಟೇ ಅಲ್ಲ, ಶ್ರೀಲೀಲಾ ತಮ್ಮ ಸಂಭಾವನೆಯನ್ನು 75 ಲಕ್ಷ ರೂ.ಗಳಿಂದ, ಒಂದು ಕೋಟಿ ರೂ.ವರೆಗೂ ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಇದಿಷ್ಟೇ ಮಾಹಿತಿ ಹೊರಬಂದಿದ್ದು, ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ವಿಚಾರ ಮುಂದಿನ ದಿನಗಳಲ್ಲಿ ಹೊರಬೀಳಲಿದೆ.