ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ಹೀಗೆ ಬಹುಭಾಷೆಯಲ್ಲಿ ಗುರುತಿಸಿಕೊಂಡಿರುವ ನಟಿ ಶ್ರದ್ಧಾ ಶ್ರೀನಾಥ್ ಲಾಕ್ಡೌನ್ ಶುರುವಾದ ಮೇಲೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಒಂದಷ್ಟು ನಟ, ನಟಿಯರು ಬೀದಿಗಿಳಿದು ಆಹಾರ, ದಿನಸಿ ಹಂಚಿಕೆ ಮಾಡಿದರಾದರೂ, ಶ್ರದ್ಧಾ ಕಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲೇ ಒಂದಾದ ಮೇಲೊಂದರಂತೆ ಫೋಟೋ ಹಾಕಿ ತಮ್ಮ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದೀಗ ಇದೇ ಶ್ರದ್ಧಾ ಸದ್ದಿಲ್ಲದೆ ಹೂ ಮಾರಾಟಕ್ಕಿಳಿದಿದ್ದಾರೆ! ಕೆಂಪು ಸೀರೆಯಲ್ಲಿ ಕೆಂದಾವರೆಯ ಜತೆಗೆ ಕುಳಿತಿದ್ದಾರೆ.
ಕಡುಗೆಂಪು ಸೀರೆ ತೊಟ್ಟು, ಪಕ್ಕದಲ್ಲೇ ಬುಟ್ಟಿಯ ತುಂಬ ಕೆಂದಾವರೆ ಹೂಗಳನ್ನು ಇಟ್ಟುಕೊಂಡು ಕುಳಿತ ಭಂಗಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ ಶ್ರದ್ಧಾ. ಬಾವಿ ಕಟ್ಟೆಯ ಮೇಲೆ ಈ ಫೋಟೋಶೂಟ್ ಮಾಡಲಾಗಿದ್ದು, ಅರ್ಜುನ್ ಕಾಮತ್ ಕ್ಯಾಮರಾ ಕಣ್ಣಲ್ಲಿ ಈ ಛಾಯಾಚಿತ್ರ ಹೊರಬಂದಿದೆ. ಫೋಟೋ ನೋಡಿದವರು ಪೇಂಟಿಂಗ್ ಮಾಡಿದ ರೀತಿಯಲ್ಲಿದೆ ಎಂದು ಕಮೆಂಟ್ ಮಾಡಿದ್ದು, ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೆಲ್ಲ ಬದಿಗಿಟ್ಟರೆ, ಲಾಕ್ಡೌನ್ ಶುರುವಾದಾಗ ಸಿನಿಮಾ ಕಾರ್ಮಿಕರಿಗಾಗಿ ನಿರ್ದೇಶಕ ಪವನ್ ಕುಮಾರ್ ಆನ್ಲೈನ್ ನಿಧಿ ಸಂಗ್ರಹಣೆ ಶುರು ಮಾಡಿದ್ದರು. ಆ ಕಾರ್ಯಕ್ಕೆ ಸ್ಯಾಂಡಲ್ವುಡ್ ಕಲಾವಿದರೂ ಕೈಲಾದ ಮಟ್ಟಿಗೆ ಧನ ಸಹಾಯ ಮಾಡಿದ್ದರು. ಆಗ ಶ್ರದ್ದಾ ಶ್ರೀನಾಥ್ ಸಹ ಕೈ ಜೋಡಿಸಿ ಸಿನಿಮಾ ಕಾರ್ಮಿಕರ ಬೆನ್ನಿಗೆ ನಿಂತಿದ್ದರು. ಸದ್ಯ ನಂದೀಶ್ ನಿರ್ದೇಶನದ ಸತೀಶ್ ನೀನಾಸಂ ಜತೆ ನಟಿಸಿರುವ ಗೋದ್ರಾ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ಇನ್ನುಳಿದಂತೆ ತಮಿಳು, ತೆಲುಗಿನಲ್ಲೂ ಹಲವು ಪ್ರಾಜೆಕ್ಟ್ಗಳಲ್ಲಿ ಶ್ರದ್ದಾ ನಟಿಸಲಿದ್ದಾರೆ.