ಸಿನಿವಾಣಿ

ಸಂಜನಾ ಡಿಜಿಟಲ್ ಸಾಹಸ: ಪ್ರತಿಭೆಗಳಿಗೆ ಹೊಸ ವೇದಿಕೆ

ಬೆಂಗಳೂರು: ಕರೊನಾ ಸಮಯದಲ್ಲಿ ಹೊಳೆದ ಯೋಜನೆಯೊಂದನ್ನು ನಟಿ ಸಂಜನಾ ಗಲ್ರಾನಿ ಕಾರ್ಯರೂಪಕ್ಕೆ ತರಲು ಶ್ರಮಿಸುತ್ತಿದ್ದಾರೆ. ಸದ್ದಿಲ್ಲದೆ ಪ್ರತಿಭಾವಂತ ಯುವ ಕಲಾವಿದರಿಗೆ ಡಿಜಿಟಲ್ ವೇದಿಕೆಯೊಂದನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಅದರ ಘೋಷಣೆಯೂ ಆಗಲಿದೆ.

ಈ ಹೊಸ ಕೆಲಸದ ಬಗ್ಗೆ ವಿಜಯವಾಣಿ ಜತೆಗೆ ಮಾತನಾಡಿರುವ ಸಂಜನಾ ಡಿಜಿಟಲ್ ವೇದಿಕೆಯ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ‘ಲಾಕ್​ಡೌನ್ ಸಂದರ್ಭದಲ್ಲಿ ನನ್ನ ಸೋಷಿಯಲ್ ಮೀಡಿಯಾ ಅಕೌಂಟ್​ಗೆ ಏನಾದರೂ ಹಣದ ಸಹಾಯ ಮಾಡಿ ಎಂಬ ಸಾಕಷ್ಟು ಸಂದೇಶಗಳು ಬರುತ್ತಿದ್ದವು. ಅದರಲ್ಲಿ ಪ್ರತಿಭಾವಂತ ಯುವ ಟಿಕ್​ಟಾಕ್ ಸ್ಟಾರ್​ಗಳು, ಡಾನ್ಸರ್ಸ್, ಮಾಡೆಲ್​ಗಳು ಹೀಗೆ... ಸಾಕಷ್ಟು ಜನರಿದ್ದರು. ಅವರೆಲ್ಲರಿಗೂ ಹಣಕಾಸಿನ ಸಹಾಯ ಮಾಡುವ ಬದಲು, ಅವರಿಗೆ ಒಂದು ವೇದಿಕೆ ಸೃಷ್ಟಿಸಿದರೆ ಹೇಗೆ ಎಂಬ ಆಲೋಚನೆ ಬಂತು.

ಅಂದಿನಿಂದ ಆತ್ಮನಿರ್ಭರ್ ಆರ್ಟಿಸ್ಟ್ ಪರಿಕಲ್ಪನೆಯಲ್ಲಿ ಡಿಜಿಟಲ್ ವೇದಿಕೆ ಅಭಿವೃದ್ಧಿಪಡಿಸುತ್ತಿದ್ದೇನೆ. ಆ ಮೂಲಕ ಅವರ ನೆರವಿಗೆ ಮುಂದಾಗುತ್ತಿದ್ದೇನೆ. ಒಂದು ಸಾವಿರ ಕಲಾವಿದರನ್ನು ಆಯ್ದುಕೊಳ್ಳಬೇಕೆಂಬುದು ನನ್ನ ಪ್ಲಾನ್’ ಹೀಗೆ ತಮ್ಮ ಮುಂದಿನ ಗುರಿ ಮತ್ತು ಕನಸನ್ನು ಹೇಳಿಕೊಂಡರು ನಟಿ ಸಂಜನಾ ಗಲ್ರಾನಿ. ಕೋವಿಡ್ ಹಿನ್ನೆಲೆಯಲ್ಲಿ ಆಗಿನ ಪರಿಸ್ಥಿತಿಯನ್ನು ಗಮನಿಸಿದ್ದ ಸಂಜನಾ, ಕೈಲಾದ ಮಟ್ಟಿಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದ್ದರು. ಅದರಂತೆ ಈಗ ಆಪ್ ಮೂಲಕ ಎಲ್ಲರಿಗೂ ನೆರವಾಗಲು ತಯಾರಿ ನಡೆಸಿದ್ದಾರೆ. ಈ ಆಪ್ ಮೇ, ಜೂನ್​ನಲ್ಲಿ ಅಧಿಕೃತವಾಗಿ ಎಲ್ಲರಿಗೂ ಲಭ್ಯವಾಗಲಿದೆ. ಈ ವೇದಿಕೆಯಲ್ಲಿ ಕೇವಲ ಪ್ರತಿಭಾವಂತ ಕಲಾವಿದರಷ್ಟೇ ಅಲ್ಲದೆ, ಸಾಕಷ್ಟು ನಿರ್ದೇಶಕರು, ಛಾಯಾಗ್ರಾಹಕರು, ನಿರ್ವಪಕರು, ತಂತ್ರಜ್ಞರು ಇರಲಿದ್ದಾರೆ. ಸದ್ಯ ಈ ಆಪ್​ನ ಟ್ರಯಲ್ ಡೆಮೊ ನಡೆಯುತ್ತಿದೆ, 12ಕ್ಕೂ ಅಧಿಕ ಜನ ಆಪ್ ಸಲುವಾಗಿ ಕೆಲಸ ಮಾಡುತ್ತಿದ್ದಾರೆ.