ಸಿನಿವಾಣಿ

ಮಂಡ್ಯ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಳ್ಳಾರಿ ಮೂಲದ ನಟಿ ರೇಖಾಶ್ರೀ

ಬೆಂಗಳೂರು: ಗಣಿನಾಡು ಬಳ್ಳಾರಿ ಮೂಲದ ನಟಿ ರೇಖಾಶ್ರೀ ‘ಮಂಡ್ಯದ ಹುಡುಗ್ರು’ ಸಿನಿಮಾದ ಮೂಲಕ ಚಂದನವನದಲ್ಲಿ ಪರಿಚಿತರಾಗಿದ್ದರು. ಇದೀಗ ಅವರ ನಟನೆಯ ‘ಪಾಲ್ಗುಣಿ’ ಚಿತ್ರವು ರಿಲೀಸ್‌ಗೆ ಸಿದ್ಧವಾಗಿದೆ. ಕಾಕಾತಾಳಿಯ ಏನೆಂದರೆ, ಈ ಚಿತ್ರದಲ್ಲೂ ಕೂಡ ಅವರು ಮಂಡ್ಯದ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೆ.ಜೆ.ಶ್ರೀನಿವಾಸ್ ನಿರ್ದೇಶನದ ನೈಜ ಘಟನೆಯಾಧರಿತ ಈ ಚಿತ್ರ ನಾಳೆ (ಆ.8) ಬಿಡುಗಡೆಯಾಗಲಿದೆ. ಇದೇ ಸಂಭ್ರಮದಲ್ಲಿರುವ ರೇಖಾಶ್ರೀ ಪಾತ್ರದ ಬಗ್ಗೆ, ‘ಇದೊಂದು ನೈಜ ಘಟನೆ ಆಧರಿತ ಚಿತ್ರ. ಪಾತ್ರಗಳು ಕೂಡ ಅಷ್ಟೇ ನೈಜವಾಗಿ ಬರಬೇಕು ಎಂಬ ಸವಾಲು ನನಗಿತ್ತು. ಹಾಗಾಗಿ, ಈ ಪಾತ್ರಕ್ಕಾಗಿ 10 ಕೆಜಿ ತೂಕ ಇಳಿಸಿಕೊಂಡಿದ್ದೆ. ಡಿ-ಗ್ಲಾಮರ್ ರೋಲ್ ಆಗಿರುವ ಕಾರಣ ಸ್ಕೀನ್ ಕಲರ್‌ನಲ್ಲಿ ಸ್ವಲ್ಪ ಬದಲಾಯಿಸಿಕೊಳ್ಳಬೇಕಾಗಿತ್ತು. ಮಹಿಳಾ ಪ್ರಧಾನವಾದ ಈ ಚಿತ್ರದಲ್ಲಿ ಮೂರು ಶೇಡ್‌ಗಳಿರುವ ಪಾಲ್ಗುಣಿ ಎಂಬ ಪಾತ್ರ ನನ್ನದು. ವಿದ್ಯಾವಂತ ಹುಡುಗಿಯ ಪಾತ್ರವಾಗಿರುವ ಕಾರಣ ಸಂಭಾಷಣೆ ಕೂಡ ಬಹುತೇಕ ಗ್ರಾಂಥಿಕ ರೂಪದಲ್ಲಿತ್ತು. ಅಲ್ಲೊಂದು ಇಲ್ಲೊಂದು ಮಾತ್ರ ಮಂಡ್ಯ ಶೈಲಿಯ ಡೈಲಾಗ್ ಇದ್ದವು. ಹಾಗಾಗಿ, ನನಗೆ ಹೆಚ್ಚು ಡೈಲಾಗ್ ವಿಚಾರದಲ್ಲಿ ಸವಾಲು ಎನಿಸಲಿಲ್ಲ. ಆದರೆ, ಹಳ್ಳಿ ಹುಡುಗಿಯ ಲುಕ್‌ಗಾಗಿಯೇ ನಾನು ಹರಸಾಹಸಪಡಬೇಕಾಯಿತು. ದೇಹದ ತೂಕ ಇಳಿಸಿಕೊಂಡು, ಮೈ ಬಣ್ಣದಲ್ಲಿ ಬದಲಾವಣೆ ಮಾಡಿಕೊಂಡು ಪಕ್ಕ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಈ ಪಾತ್ರಕ್ಕಾಗಿ ಒಂದು ವಾರಗಳ ಕಾಲ ಕಾಸ್ಟ್ಯೂಮ್‌ಗಾಗಿ ಹುಡುಕಾಟ ನಡೆಸಿದ್ದೇವೆ’ ಎಂದು ಮಾಹಿತಿ ನೀಡಿದರು. ರೇಖಾಶ್ರೀ ಕನ್ನಡದಲ್ಲಿ ಸದ್ಯ ಮೂರು ಚಿತ್ರಗಳಿಗೆ ಸಹಿ ಹಾಕಿದ್ದು, ಒಂದು ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ. ಇನ್ನು ತಮಿಳಿನ ಡೆಬ್ಯೂ ಚಿತ್ರ ‘ವಿಶಾಲಿ’ ಶೂಟಿಂಗ್ ಪೂರ್ಣವಾಗಿದ್ದು, ಕನ್ನಡ ಹಾಗೂ ತಮಿಳಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ.