'ಪ್ರೇಮದ ಊರಲಿ' ಸಿನಿಮಾ ಮೆಚ್ಚಿಕೊಂಡ ನಟಿ ರಶ್ಮಿಕಾ ಮಂದಣ್ಣ
ಕೂರ್ಗ್ ನಟಿ ತಪಸ್ವಿನಿ ಪೊಣಚ್ಚ ಕನಸು ನನಸಾಗಲಿ ಎಂದು ಹಾರೈಕೆ
ದೇವತೆಯಂತಿರುವ ನಿಮ್ಮಿಂದ ಈ ಮಾತು ಕೇಳಿರುವುದು ನನ್ನ ದಿನ ಸುಂದರವಾಗಿಸಿದೆ ಎಂದು ತಪಸ್ವಿನಿ ಕಾಮೆಂಟ್
Rashmika Mandanna On Premada oorali cinema: ಬಿಗ್ ಬಜೆಟ್ ಸಿನಿಮಾಗಳಿಗೆ ಸೆಡ್ಡು ಹೊಡೆದು 'ಪ್ರೇಮದ ಊರಲಿ' ಸದ್ಯ ಥಿಯೇಟರ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅ.25ರಂದು ರಿಲೀಸ್ ಆದ ಈ ಸಿನಿಮಾವು 17 ದಿನದಲ್ಲಿ ಐವತ್ತು ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ. ಸದ್ಯ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಈ ಸಿನಿಮಾ ಬಗ್ಗೆ ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ ಮಾತನಾಡಿದ್ದು, ಕೂರ್ಗ್ ನಟಿ ತಪಸ್ವಿನಿ ಅವರ ನಟನೆಯನ್ನು ಕೊಂಡಾಡಿದ್ದಾರೆ.
ಪ್ರೇಮದ ಊರಲಿ ಸಿನಿಮಾದಲ್ಲಿ ಹಿರಿಯ ನಟ ರಂಗಾಯಣ ರಘು, ಕಿರುತರೆಯಲ್ಲಿ ಮಿಂಚಿದ್ದ ಶ್ರೀರಾಮ್, ರಮಿಕಾ ಶಿವು, ಹರಿಕತೆ ಅಲ್ಲ ಗಿರಿಕತೆ ನಟಿ ತಪಸ್ವಿನಿ ಪೊಣಚ್ಚ ಮಿಂಚಿದ್ದರು. ಇದೊಂದು ಟಾಕ್ಸಿಕ್, ದ ಪ್ಯಾರಡೈಸ್, ಬೇಲ್ ನಂತಹ ಸ್ಟಾರ್ ನಟರ ಸಿನಿಮಾಗಳು ಬೆಳ್ಳಿ ತೆರೆಗೆ ಕಾಲಿಟ್ಟ ನಂತರವೂ ಪ್ರೇಮದ ಊರಲಿ ಮೇಲಿನ ಜನರ ಪ್ರೀತಿ ಇನ್ನು ಕಡಿಮೆಯಾಗಿಲ್ಲ.
ಸಿನಿಮಾ ಬಗ್ಗೆ ಮೆಚ್ಚಿಕೊಂಡು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು, 'ಕೊಡಗಿನಿಂದ ಬಂದ ಹುಡುಗಿಯೊಬ್ಬಳು ಸಿನಿಮಾದಲ್ಲಿ ನಟಿಸಿ, ಆ ಸಿನಿಮಾ ಚಿತ್ರಮಂದಿರಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿರುವುದು..ನಿಜಕ್ಕೂಸಂತೋಷದಾಯಕ. ತಪಸ್ವಿನಿ ಪೊಣಚ್ಚ ಅವರೇ ನಿಮ್ಮನ್ನು ನೋಡಿ ನನಗೆ ತುಂಬಾ ತುಂಬಾ ಹೆಮ್ಮೆಯಾಗುತ್ತಿದೆ. ನನ್ನ ಸುಂದರ ಹುಡುಗಿ ತಪಸ್ವಿನಿಗೆ ನನ್ನ ಅಪಾರ ಪ್ರೀತಿ ಸಲ್ಲುತ್ತದೆ...ಸಾಕಷ್ಟು ಅಭಿನಂದನೆ ಸಲ್ಲಿಸುತ್ತೇನೆ. ಇದು ಕೇವಲ ಆರಂಭವಷ್ಟೇ. ನಿನ್ನ ಎಲ್ಲ ಕನಸುಗಳು ನನಸಾಗಲಿ ಎಂದು ನಾನು ಹಾರೈಸುತ್ತೇನೆ. ನಮ್ಮಿಬ್ಬರನ್ನು ನಿರೂಪಕಿ ಅನುಶ್ರೀ ಅವರನ್ನು ಟ್ಯಾಗ್ ಮಾಡಿ ನಾವಿಬ್ಬರು ಮಾತನಾಡುವಂತೆ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, ತುಂಬಾ ಸಂತೋಷವಾಯಿತು' ಎಂದು ಬರೆದುಕೊಂಡಿದ್ದಾರೆ.
ದೇವತೆಯಂತಿರುವ ನಿಮ್ಮಿಂದ ಈ ಮಾತುಗಳು ಬಂದಿರುವುದು ನನ್ನ ದಿನವನ್ನು ಇನ್ನಷ್ಟು ಸುಂದರಗೊಳಿಸಿದೆ. ಎಲ್ಲದಕ್ಕೂ ಧನ್ಯವಾದಗಳು ಅನುಶ್ರೀ ಅವರೇ ಎಂದು ಪ್ರೇಮದ ಊರಲಿ ನಟಿ ತಪಸ್ವಿನಿ ಪೊಣಚ್ಚ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನಟ ವಸಿಷ್ಠ ಸಿಂಹ ಅವರು ಸಿನಿಮಾವನ್ನು ಮೆಚ್ಚಿಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ಅವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೊಂದು ಫೀಲ್ ಗುಡ್ ಸಿನಿಮಾವಾಗಿದೆ. ಹೆಂಡತಿ ಮತ್ತು ತಂಗಿಯನ್ನು ಕಳೆದುಕೊಂಡ ಕಥಾ ನಾಯಕನ ತಂದೆ ನಾಗಣ್ಣ..ತನ್ನ ಮಗನಿಗೆ ಓದಿರುವ ಹುಡುಗಿಯನ್ನೇ ತಂದುಕೊಳ್ಳಬೇಕು ಎನ್ನುವುದು ಆಸೆ. ನಾಗಣ್ಣನ ತಂಗಿಗೆ ಮಗಳಿರುತ್ತಾಳೆ ಆಕೆ ವಸಂತ. ಚಿಕ್ಕಂದಿನಿಂದ ಮಾವನ ಮನೆಯಲ್ಲಿಯೇ ಖಾಯಂ ವಾಸ. ಆಕೆಗೆ ನಾಯಕನ ಮೇಲೆ ಪ್ರೀತಿ. ನಾಯಕನಿಗೆ ತನ್ನನ್ನು ಮದುವೆಗೆ ರಿಜೆಕ್ಟ್ ಮಾಡಿದ ಹುಡುಗಿಯ ಗೆಳತಿ ರುಕ್ಮಿಣಿ ಮೇಲೆ ಪ್ರೀತಿ. ಅಚಾನಕ್ಕಾಗಿ ನಡೆಯುವ ಘಟನೆಯಲ್ಲಿ ಇಬ್ಬರು ಮದುವೆಯಾಗುತ್ತಾರೆ. ಸುಖವಾಗಿ ದಾಂಪತ್ಯ ಜೀವನ ನಡೆಸುವ ಹೊತ್ತಿಗೆ ರುಕ್ಮಿಣಿಯ ಹಳೆಯ ವಿದ್ಯಾಭ್ಯಾಸ ಕೆಲಸದ ವೇಳೆ ಯುವಕನೊಬ್ಬನನ್ನು ಪ್ರೀತಿಸಿದ ವಿಚಾರ ತಿಳಿಯುತ್ತದೆ. ಆಕೆಯ ವಿರುದ್ಧ ಮನಸ್ಥಾಪ ಹೆಚ್ಚಾಗುತ್ತದೆ. ಆನಂತರ ಏನಾಗುತ್ತದೆ ಎನ್ನುವ ಸುತ್ತ ಕತೆಯನ್ನು ಕಟ್ಟಿಕೊಡಲಾಗಿದೆ, (ಏಜೆನ್ಸೀಸ್).