ಸಿನಿವಾಣಿ

ಬೆಂಗಳೂರು ಹುಡುಗನ ಕೈಹಿಡಿದ ಖ್ಯಾತ ತಮಿಳು ನಟಿ ರಮ್ಯಾ

ತಮಿಳಿನ "ಜೋಕರ್​', "ಆನ್​ ದೇವತೈ' ಚಿತ್ರಗಳು, "ಕುಕ್ಕು ವಿತ್​ ಕೋಮಾಲಿ' ಮತ್ತು "ಬಿಗ್​ಬಾಸ್​' ರಿಯಾಲಿಟಿ ಶೋಗಳು ಸೇರಿ ಕೆಲ ವೆಬ್​ಸರಣಿಗಳಲ್ಲೂ ನಟಿಸಿರುವ ಖ್ಯಾತಿ ನಟಿ ರಮ್ಯಾ ಪಾಂಡಿಯನ್​ಗೆ ಸಲ್ಲುತ್ತದೆ. ಇಂತಹ ರಮ್ಯಾ ಶುಕ್ರವಾರ (ನ. 8) ರಿಷಿಕೇಶದ ಶಿವಪುರಿಯಲ್ಲಿ ಗಂಗಾನದಿಯ ದಡದಲ್ಲಿ ಬೆಂಗಳೂರು ಮೂಲದ ಯೋಗ ತರಬೇತುದಾರ ಲವೆಲ್​ ಧವನ್​ ಜತೆ ಸಪ್ತಪದಿ ಇರಿಸಿದ್ದಾರೆ.

ಗಂಗಾ ನದಿಯ ದಡದಲ್ಲಿಯೇ ಸಣ್ಣ ವೇದಿಕೆ ನಿರ್ಮಿಸಿ, ಹಿಂದು ಸಂಪ್ರದಾಯದಂತೆ ನವದಂಪತಿ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಪಂಜಾಬ್​ ಮೂಲದ ಲವೆಲ್​ ಧವನ್​ ಬೆಂಗಳೂರಿನ ಆರ್ಟ್​ ಆಫ್​​ ಲಿವಿಂಗ್​ನಲ್ಲಿ ಯೋಗ ತರಬೇತುದಾರರಾಗಿದ್ದು, ಕಳೆದ ವರ್ಷ ರಮ್ಯಾ ಕೂಡ ಯೋಗ ತರಬೇತಿ ಪಡೆಯಲು ಅಲ್ಲಿಗೆ ಆಗಮಿಸಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು ಎನ್ನಲಾಗಿದೆ. ಕ್ರಮೇಣ ಇಬ್ಬರೂ ತಮ್ಮ ಕುಟುಂಬದವರನ್ನು ಒಪ್ಪಿಸಿ, ಇದೀಗ ಗೃಹಸ್ತಾಶ್ರಮ ಪ್ರವೇಶಿಸಿದ್ದಾರೆ.

ರಮ್ಯಾ ಸೋದರ ಸಂಬಂಧಿಗಳಾದ ಕಾಲಿವುಡ್​ ನಟ ಅಶೋಕ್​ ಸೆಲ್ವನ್​ ಮತ್ತು ನಟಿ ಕೀರ್ತಿ ಪಾಂಡಿಯನ್​ ಕುಟುಂಬ ಸೇರಿ ಕೆಲವೇ ಮಂದಿ ಆಪ್ತರು ಮದುವೆಯಲ್ಲಿ ಭಾಗವಹಿಸಿ, ನವದಂಪತಿಗೆ ಶುಭಹಾರೈಸಿದ್ದಾರೆ. ಇದೇ ಶುಕ್ರವಾರ (ನ. 15) ಚೆನ್ನೆ$ನಲ್ಲಿ ರಮ್ಯಾ ಮತ್ತು ಲವೆಲ್​ ಧವನ್​ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ.