ಸಿನಿವಾಣಿ

ಲವ್ ಯೂ ಸನಾ... ಉದ್ಯಮಿ ಸಂಜೀವ್ ಮೋಹನ್ ಜತೆ ನಟಿ ರಮ್ಯಾ ಡೇಟಿಂಗ್ ವದಂತಿ! Actress Ramya

Actress Ramya : ಮಾಜಿ ಸಂಸದೆ, ನಟಿ ರಮ್ಯಾ ಮದುವೆ ಮತ್ತು ಪ್ರೀತಿಯ ವಿಷಯ ಆಗಾಗ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುತ್ತದೆ. ಕಳೆದ ಸೆಪ್ಟೆಂಬರ್​ನಲ್ಲಿ ರಮ್ಯಾ, ಮದುವೆ ಪಕ್ಕಾ ಆಗಿದೆ. ಅಕ್ಟೋಬರ್​ನಲ್ಲಿ ನಿಶ್ಚಿತಾರ್ಥ, ನ.29ರಂದು ಅವರ ಹುಟ್ಟುಹಬ್ಬದಂದೇ ವಿವಾಹ ನಡೆಯಲಿದೆ ಅಂತೆಲ್ಲಾ ಸುದ್ದಿ ಸದ್ದು ಹರಡಿತ್ತು. ಆದರೆ, ಆ ಗಾಳಿಸುದ್ದಿಗೆ ಖುದ್ದು ರಮ್ಯಾ ಅವರೇ, ‘ನನಗೆ ಅದೆಷ್ಟು ಬಾರಿ ಮದುವೆ ಮಾಡಿಸಿದ್ದಾರೋ, ನನಗೇ ಲೆಕ್ಕಕ್ಕೆ ಸಿಗುತ್ತಿಲ್ಲ. ಹಾಗೇನಾದರೂ ನಾನು ಮದುವೆ ಆಗುವುದಾದರೆ, ನಿಮಗೆ ತಿಳಿಸಿಯೇ ಆಗುತ್ತೇನೆ. ಯಾವುದೋ ಮೂಲಗಳಿಂದ ಬಂದ ಸುದ್ದಿಗಳಿಗೆ ಕಿವಿಗೊಡಬೇಡಿ’ ಎಂದು ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದರು. ಅದರ ಬೆನ್ನಲ್ಲೇ ನ. 29ರಂದು 42ನೇ ವಸಂತಕ್ಕೆ ಕಾಲಿಟ್ಟ ರಮ್ಯಾ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಲವ್ ಯೂ ಫಾರೆವರ್, ಲವ್ ಯೂ ಸನಾ!: ರಮ್ಯಾ ಹುಟ್ಟುಹಬ್ಬಕ್ಕೆ ಉದ್ಯಮಿ ಸಂಜೀವ್ ಮೋಹನ್ ಸಾಮಾಜಿಕ ಜಾಲತಾಣದಲ್ಲಿ ಶುಭಕೋರಿದ್ದಾರೆ. ತಮ್ಮಿಬ್ಬರ ಫೋಟೋ ಹಂಚಿಕೊಂಡಿರುವ ಅವರು, ‘ಹುಟ್ಟುಹಬ್ಬದ ಶುಭಾಶಯಗಳು ನನ್ನ ದಿವೂ (ದಿವ್ಯ ಸ್ಪಂದನ), ಲವ್ ಯೂ ಫಾರೆವರ್. ನಿನ್ನೊಂದಿಗೆ ಹೋಗುವ ಪ್ರವಾಸಗಳು ಎಂದಿಗೂ ಅದ್ಭುತ’ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ರಮ್ಯಾ, ‘ಲವ್ ಯೂ ಸನಾ’ ಎಂದು ಹೃದಯದ ಎಮೋಜಿಗೆ ಜತೆ ಬರೆದುಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್​ಗಳು ವೈರಲ್ ಆಗಿವೆ. ಆದರೆ, ಹ್ಯಾಶ್​ಟ್ಯಾಗ್​ನಲ್ಲಿ ಬೆಸ್ಟೀ ಎಂಬ ಪದ ಬಳಸಿ ಕೊಂಡಿರುವುದು ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಇರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಕೀನ್ಯಾದಲ್ಲಿ ಬರ್ತ್​ಡೇ ಆಚರಣೆ: ಅಂದಹಾಗೆ ನಟಿ ರಮ್ಯಾ 42ನೇ ಹುಟ್ಟುಹಬ್ಬವನ್ನು ಕೀನ್ಯಾದ ಹೆಸರಾಂತ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಅರಣ್ಯದಲ್ಲಿ ಆಚರಿಸಿಕೊಂಡಿದ್ದಾರೆ. ವಿಶೇಷ ಅಂದರೆ, ಅವರ ಈ ಪ್ರವಾಸದಲ್ಲಿ ಉದ್ಯಮಿ ಸಂಜೀವ್ ಮೋಹನ್ ಕೂಡ ಜತೆಯಾಗಿದ್ದಾರೆ. ಮಾತ್ರವಲ್ಲ ಕಳೆದ 2023ರ ಅ.15ರಂದು ಅಹಮದಾಬಾದ್​ನಲ್ಲಿ ನಡೆದ ಭಾರತ, ಪಾಕಿಸ್ತಾನ ನಡುವಿನ ಟಿ-ಟ್ವೆಂಟಿ ವಿಶ್ವಕಪ್ ವೀಕ್ಷಿಸಲು ರಮ್ಯಾ, ಸಂಜೀವ್ ಒಟ್ಟಿಗೆ ಹೋಗಿದ್ದರು. ಹಾಗೇ ದೆಹಲಿ, ಸಿಂಗಾಪುರ ಸೇರಿ ಹಲವೆಡೆ ಒಟ್ಟಿಗೆ ಪ್ರವಾಸ ಹೋಗಿದ್ದಾರೆ.

ಮುಂದಿನ ಸಿನಿಮಾ?

ರಮ್ಯಾ 2016ರಲ್ಲಿ ರಿಲೀಸ್ ಆದ ‘ನಾಗರಹಾವು’ ಚಿತ್ರದ ಬಳಿಕ ಮತ್ತೆ ನಾಯಕಿಯಾಗಿ ನಟಿಸಿಲ್ಲ. ಆಪಲ್ ಬಾಕ್ಸ್ ಸ್ಟುಡಿಯೋಸ್ ಪ್ರಾರಂಭಿಸಿ ಕಳೆದ ವರ್ಷ ತೆರೆಗೆ ಬಂದ ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರದ ಮೂಲಕ ನಿರ್ವಣಕ್ಕಿಳಿದ ನಟಿ ರಮ್ಯಾ, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲೂ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಆದರೆ, ಆ ಎರಡೂ ಸಿನಿಮಾಗಳ ಸಮಯದಲ್ಲಿ ತಂಡಗಳ ಜತೆ ಗೊಂದಲ ಉಂಟಾಗಿತ್ತು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ವಿಷಯ ಕೋರ್ಟ್ ಮೆಟ್ಟಿಲೂ ಏರಿತ್ತು. ನಂತರ ಡಾಲಿ ಧನಂಜಯ ಮತ್ತು ಶಿವರಾಜಕುಮಾರ್ ನಟಿಸುತ್ತಿರುವ, ರೋಹಿತ್ ಪದಕಿ ನಿರ್ದೇಶಿಸುತ್ತಿರುವ ‘ಉತ್ತರಕಾಂಡ’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತಾದರೂ, ಕಾರಣಾಂತರಗಳಿಂದ ರಮ್ಯಾ ಚಿತ್ರದಿಂದ ಹೊರನಡೆದರು. ಆ ಬಳಿಕ ಅವರು ನಟನೆ ಅಥವಾ ನಿರ್ವಣದ ಬಗ್ಗೆ ಮತ್ತೆ ಮಾಹಿತಿ ಬಿಟ್ಟುಕೊಟ್ಟಿಲ್ಲ.