| ಹರ್ಷವರ್ಧನ್ ಬ್ಯಾಡನೂರು
ನಟಿ ರಚಿತಾ ರಾಮ್ ಗೆ ಮೊದಲಿನಿಂದಲೂ ನೆಗಟಿವ್ ಶೇಡ್ನಲ್ಲಿ ವಿಲನ್ ಪಾತ್ರದಲ್ಲಿ ನಟಿಸುವ ಆಸೆ ಇತ್ತಂತೆ. ಅದೀಗ ರಜಿನಿಕಾಂತ್, ನಾಗಾರ್ಜುನ, ಉಪೇಂದ್ರ, ಸೌಬಿನ್ ಶಹೀರ್, ಶ್ರುತಿ ಹಾಸನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಕೂಲಿ' ಚಿತ್ರದಲ್ಲಿ ನೆರವೇರಿದೆ. "ಕಲ್ಯಾಣಿ' ಎಂಬ ಖಡಕ್ ಖಳನಟಿಯಾಗಿ ರಚಿತಾ ಮಿಂಚಿದ್ದು, ಅವರ ಪಾತ್ರ "ಕೂಲಿ' ಚಿತ್ರದ ಅತಿದೊಡ್ಡ ಸರ್ಪ್ರೈಸ್ ಪ್ಯಾಕೇಜ್ ಎನಿಸಿಕೊಂಡಿದೆ. ಪಾತ್ರ ಮತ್ತು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಬೆನ್ನಲ್ಲೇ, ರಚಿತಾ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.
"ಕೂಲಿ'ಗೆ ಆಯ್ಕೆಯಾದ ಬಗ್ಗೆ ರಚಿತಾ, "ನಿರ್ದೇಶಕ ಲೋಕೇಶ್ ಕನಗರಾಜ್ ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದೆ. "ಮಾಸ್ಟರ್', "ಲಿಯೋ' ಸೇರಿ ಅವರ ನಿರ್ದೇಶನಕ್ಕೆ ನಾನು ದೊಡ್ಡ ್ಯಾನ್. ಹಾಗೇ ನಾನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವುದು ಅವರಿಗೂ ಗೊತ್ತಿತ್ತು. ಅವರ ನಿರ್ದೇಶನದಲ್ಲಿ ನಟಿಸುವ ಬಗ್ಗೆ ಹೇಳಿದೆ. ಅವರು ನಿಮಗೆ ಯಾವ ರೀತಿಯ ಪಾತ್ರ ಇಷ್ಟ ಎಂದು ಕೇಳಿದರು. ನಾನು ವಿಲನ್ ಎಂದೆ. ಬಳಿಕ ಅವರು ತುಂಬ ಯೋಚಿಸಿ, ಒಂದು ಸವಾಲಿನ ಪಾತ್ರವನ್ನೇ ಡಿಸೈನ್ ಮಾಡಿ "ಕೂಲಿ' ಚಿತ್ರದಲ್ಲಿ ಕಲ್ಯಾಣಿ ಪಾತ್ರ ಕೊಟ್ಟರು' ಎಂದು ಮಾಹಿತಿ ನೀಡುತ್ತಾರೆ.
ಪರಭಾಷೆಗಳಲ್ಲಿ ಅವಕಾಶ ಸಿಕ್ಕರೂ ರಚಿತಾ ರಾಮ್, ಹೋಗದೇ ಕನ್ನಡದಲ್ಲೇ ಉಳಿಯಲು ನಿರ್ಧರಿಸಿದ್ದರಂತೆ. "ನಟಿಯರು ಕನ್ನಡದಲ್ಲಿ ಡೆಬ್ಯೂ ಮಾಡಿದ ತಕ್ಷಣ ಬೇರೆ ಚಿತ್ರರಂಗಕ್ಕೆ ಹೋಗಿಬಿಡುತ್ತಾರೆ ಅಂತ ಅಪವಾದವಿದೆ. ಹೀಗಾಗಿ ನಾನು ಕನಿಷ್ಠ 10 ವರ್ಷ ಕನ್ನಡ ಚಿತ್ರರಂಗದಲ್ಲಿಯೇ ಇದ್ದು, ನಂತರ ಪರಭಾಷೆಗೆ ಹೋಗಲು ಯೋಚಿಸಿದ್ದೆ. ಹೀಗಾಗಿಯೇ ಹಲವು ಅವಕಾಶಗಳು ಬಂದರೂ ಒಪ್ಪಿರಲಿಲ್ಲ. ಆ ಬಳಿಕವಷ್ಟೇ ತೆಲುಗು ಮತ್ತು ತಮಿಳಿನಲ್ಲಿ ನಟಿಸಿದ್ದು' ಎನ್ನುತ್ತಾರೆ ರಚಿತಾ.
ರಚಿತಾ ರಾಮ್ "ಬುಲ್ಬುಲ್'ನಲ್ಲಿ ನಾಯಕಿಯಾಗುವ ಮುನ್ನ "ಅರಸಿ' ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದರು. "ನಿರ್ದೇಶಕ ಅರವಿಂದ್ ಕೌಶಿಕ್ "ಅರಸಿ' ಪಾತ್ರದ ಬಗ್ಗೆ ಹೇಳುವಾಗ ಅಳುವ ಪಾತ್ರ ಬೇಕಾ, ಅಳಿಸುವ ಪಾತ್ರ ಬೇಕಾ ಎಂದು ಕೇಳಿದ್ದರು. ನನಗೆ ಮೊದಲಿನಿಂದಲೂ ವಿಲನ್ ಪಾತ್ರದಲ್ಲಿ ನಟಿಸುವ ಆಸೆ ಇದ್ದ ಕಾರಣ ಅಳಿಸುವ ಪಾತ್ರ ಒಪ್ಪಿಕೊಂಡೆ. ನಾನು ಕೆಲಸ ಮಾಡಿರುವ ಎಲ್ಲ ನಿರ್ದೇಶಕರಿಗೂ ವಿಲನ್ ಪಾತ್ರ ಕೊಡಿ ಎಂದು ಕೇಳಿದ್ದೆ. ಕನ್ನಡದಲ್ಲಿ ಲೇಡಿ ವಿಲನ್ಗಳಿಲ್ಲ. ನಾನು ಆಗಬೇಕು ಅಂತ ಕೇಳಿದ್ದೆ. ಆದರೆ, ಡಿಂಪಲ್ ಇಟ್ಟುಕೊಂಡು ಕ್ಯೂಟ್ ಆಗಿರುವ ನಿಮ್ಮನ್ನು ವಿಲನ್ ಆಗಿ ಯಾರು ಒಪ್ಪಿಕೊಳ್ಳುತ್ತಾರೆ ಅಂತ ಯಾರೂ ಕೊಟ್ಟಿರಲಿಲ್ಲ. ದರ್ಶನ್ ಸರ್ಗೂ "ಕ್ರಾಂತಿ' ಸಮಯದಲ್ಲಿ ಹೇಳಿದ್ದೆ. ನಾಯಕಿಯಾಗಿ ಎಲ್ಲರೂ ನಟಿಸಬಲ್ಲರು. ಆದರೆ, ರಾಕ್ಷಸತನ ತೋರಿಸುವ, ಒಬ್ಬ ದೊಡ್ಡ ಸ್ಟಾರ್ ಮುಂದೆ ನಿಂತು ಸವಾಲು ಹಾಕುವುದಿದೆಯಲ್ಲಾ ಅದು ಕೊಡುವ ಥ್ರಿಲ್ ಬೇರೆ ಪಾತ್ರ ಕೊಡುವುದಿಲ್ಲ. ಇನ್ನುಮುಂದೆ ಉತ್ತಮ ಕಥೆ, ಉತ್ತಮ ನೆಗಟಿವ್ ಶೇಡ್ ಪಾತ್ರಗಳು ಸಿಕ್ಕರೆ ಖಂಡಿತ ನಟಿಸುತ್ತೇನೆ' ಎಂದು ಹೇಳಿಕೊಳ್ಳುತ್ತಾರೆ.
"ಕೂಲಿ' ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೂ ರಚಿತಾ ಈ ಬಗ್ಗೆ ತುಟಿ ಪಿಟಕ್ ಅಂದಿರಲಿಲ್ಲ. ಚಿತ್ರತಂಡ ಕೂಡ ಅವರ ಪಾತ್ರವನ್ನು ಗುಟ್ಟಾಗಿಟ್ಟಿತ್ತು. ಈ ಬಗ್ಗೆ, "ನನಗೆ ಹೇಳಿಕೊಂಡು ಅಭ್ಯಾಸವಿಲ್ಲ. ಫ್ರೀ ಪಬ್ಲಿಸಿಟಿ ಇಷ್ಟವಿಲ್ಲ. ಹೀಗಾಗಿಯೇ "ಕೂಲಿ' ಚಿತ್ರ, ನನ್ನ ಪಾತ್ರದ ಬಗ್ಗೆ ನಾನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮಾತಿಗಿಂತ ನಮ್ಮ ಕೆಲಸ ಮಾತನಾಡಬೇಕು ಎಂಬ ನಂಬಿಕೆ ನನ್ನದು' ಎನ್ನುತ್ತಾರೆ ರಚಿತಾ.
ನಟ ರಜಿನಿಕಾಂತ್ ಜತೆ ತೆರೆ ಹಂಚಿಕೊಂಡ ಬಗ್ಗೆ ರಚಿತಾ, "2024ರ ಆ. 27ರ ಕೃಷ್ಣಜನ್ಮಾಷ್ಟಮಿ ದಿನ ನನ್ನ ಭಾಗದ ಚಿತ್ರೀಕರಣ ಪ್ರಾರಂಭವಾಯಿತು. ಮೊದಲ ದಿನವೇ ರಜಿನಿ ಸರ್, ಶೌಬಿನ್, ಶ್ರುತಿ ಹಾಸನ್ ಜತೆ ಶೂಟಿಂಗ್ ಇತ್ತು. ನಾನಿಷ್ಟ ಪಡುವ ಕೆಲವೇ ನಟರಲ್ಲಿ ರಜಿನಿ ಸರ್ ಪ್ರಮುಖರು. ಅವರಿಗೆ ವಿಲನ್ ಆಗಿ ನಟಿಸಬೇಕು ಎಂಬುದು ನನ್ನ ಬಹುವರ್ಷಗಳ ಕನಸು. ಚಿತ್ರರಂಗಕ್ಕೆ ಬಂದಾಗಿನಿಂದ ಪ್ರತಿ ವರ್ಷ ಈ ಅವಕಾಶ ಸಿಗಲಿ ಅಂತ ಕೇಳಿಕೊಳ್ಳುತ್ತಿದ್ದೆ. ಅದು ನೆರವೇರಿದ ದಿನವದು. ಅವರನ್ನು ಭೇಟಿಯಾದ ತಕ್ಷಣ ನಾನು ಕನ್ನಡಿಗಳು ಅಂತ ತಿಳಿದು, "ಓಹ್ ಕನ್ನಡದವರಾ ನೀವು ರಚಿತಾ? ತಮಿಳು ಚಿತ್ರರಂಗಕ್ಕೆ ವೆಲ್ಕಮ್. ಒಳ್ಳೆಯದಾಗಲಿ ನಿಮಗೆ' ಎಂದು ವಿಶ್ ಮಾಡಿದರು. ಕೆಲ ದಿನಗಳ ನಂತರ ಬ್ಯಾಂಕಾಕ್ನಲ್ಲಿ ನನ್ನ ಮತ್ತು ನಾಗಾರ್ಜುನರ ಭಾಗದ ಚಿತ್ರೀಕರಣ ಮುಗಿಸಿ ವಾಪಸ್ ಹೊರಟಿದ್ದೆ, ಆಗ ರಜಿನಿ ಸರ್ ಕರೆ ಮಾಡಿ, "ನಿಮ್ಮ ಹಿಂದಿನ ಚಿತ್ರಗಳನ್ನು ನಾನು ನೋಡಿಲ್ಲ. ಆದರೆ, ಈ ಚಿತ್ರದಲ್ಲಿ ನಿಮ್ಮ ನಟನೆ ನೋಡಿ ನನಗೆ ಹೆಮ್ಮೆ ಎನಿಸುತ್ತಿದೆ. ನಿಮ್ಮ ಪಾರ್ಮೆನ್ಸ್ ತುಂಬ ಖುಷಿ ಕೊಟ್ಟಿದೆ. ನಮ್ಮ ಕನ್ನಡದ ಹುಡುಗಿ ಇಲ್ಲಿಗೆ ಬಂದು ನಾಗಾರ್ಜುನ ಅವರಂತಹ ದೊಡ್ಡ ನಟರ ಮುಂದೆಯೂ ಅದ್ಭುತವಾಗಿ ನಟಿಸಿದ್ದಿ. ಯೂ ಆರ್ ಎ ಸ್ಟ್ರಾಂಗ್ ಗರ್ಲ್' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು' ಎಂದು ಸಂತಸ ಹಂಚಿಕೊಳ್ಳುತ್ತಾರೆ ರಚಿತಾ.
ಕೆಲ ದಿನಗಳ ಹಿಂದೆ ತಮಿಳು ನಟ ಕಮಲ್ ಹಾಸನ್, ಕನ್ನಡದ ಬಗ್ಗೆ ನೀಡಿದ್ದ ಹೇಳಿಕೆಯನ್ನು ವಿರೋಧಿಸಿದ ಕೆಲವೇ ಕನ್ನಡ ನಟ, ನಟಿಯರಲ್ಲಿ ರಚಿತಾ ರಾಮ್ ಮೊದಲಿಗರು. ಮೊದಲ ತಮಿಳು ಚಿತ್ರದಲ್ಲಿ ನಟಿಸಿದ್ದರೂ, ಕನ್ನಡವೇ ಮೊದಲು ಎಂದು ಧ್ವನಿ ಎತ್ತಿದ್ದರ ಬಗ್ಗೆ ರಚಿತಾ, "ನನಗೆ ಎಲ್ಲ ಭಾಷೆಗಳ ಮೇಲೂ ಪ್ರೀತಿ, ಅಭಿಮಾನ ಇದೆ. ನಾನು ಎಲ್ಲ ಭಾಷೆಯ ಹಾಡುಗಳನ್ನೂ ಕೇಳುತ್ತೇನೆ, ಸಿನಿಮಾ ನೋಡುತ್ತೇನೆ. ಆದರೆ, ನನ್ನ ಭಾಷೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಮಾತನಾಡಿದಾಗ ನಾನು ಧ್ವನಿ ಎತ್ತುತ್ತೇನೆ. ಹಾಗಂತ ನಾನು ಬೇರೆ ಭಾಷೆಯ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ನಮ್ಮ ಭಾಷೆಯ ಬಗ್ಗೆ ಅವರು ಮಾತನಾಡಿರುವುದು ತಪು$್ಪ ಅಂತಷ್ಟೇ ಹೇಳಿದ್ದೆ. ಕಮಲ್ ಸರ್ ಅವರಂತಹ ವರ್ಸಟೈಲ್ ನಟನ ಬಗ್ಗೆ ಮಾತನಾಡಲಿಲ್ಲ. ಅವರೊಬ್ಬ ಲೆಜೆಂಡ್ ನಿಜ. ಆದರೆ, ಎಲ್ಲರಿಗೂ ಅವರವರ ಭಾಷೆ ದೊಡ್ಡದು. ಹೀಗಾಗಿಯೇ ನಾನು ನನ್ನ ಭಾಷೆ ಬಗ್ಗೆ ಮಾತನಾಡಿದೆ. ಅವರ ಮಾತಿನಿಂದ ನನಗೆ ನೋವಾಗಿದೆ ಅಂತ ಹೇಳಿಕೊಂಡೆ. ನನಗೆ ಕನ್ನಡ ಮೊದಲು, ನಂತರ ಬೇರೆ ಭಾಷೆಗಳು. ಇದೆಲ್ಲ ಆಗಿ ಒಂದು ತಿಂಗಳ ಬಳಿಕ ನಾನು ಚೆನ್ನೆ$ಗೆ ಹೋಗಿದ್ದೆ. ಆಗ ಎಲ್ಲರೂ ಆರಾಮಾಗಿ, ನನ್ನ ಜತೆ ಚೆನ್ನಾಗಿದ್ದರು. ನಿಮ್ಮ ಭಾಷೆಯ ಬಗ್ಗೆ ನೀವು ಮಾತನಾಡಿದ್ದೀರಿ, ಅದರಲ್ಲಿ ತಪ್ಪಿಲ್ಲ ಬಿಡಿ ಎಂದರು' ಎಂದು ಮಾಹಿತಿ ನೀಡುತ್ತಾರೆ ರಚಿತಾ.
ಇನ್ನೇನು ರಚಿತಾ ರಾಮ್ ಅವರ ಕರಿಯರ್ ಮುಗಿದೇ ಹೋಯಿತು ಎಂದು ಕೆಲವರು ಆಡಿಕೊಳ್ಳುತ್ತಿದ್ದರಂತೆ. ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ, ಕೆಟ್ಟ ಕಮೆಂಟ್ಗಳೂ ಬರುತ್ತಿದ್ದವಂತೆ. ಆದರೆ, ಅದು ಯಾವುದಕ್ಕೂ ಹೆದರದೇ, ಜಗ್ಗದೇ ರಚಿತಾ ತಮ್ಮ ಕೆಲಸದ ಮೂಲಕವೇ ಎಲ್ಲದಕ್ಕೂ ಉತ್ತರ ನೀಡಿದ್ದಾರೆ. "ನಾನು ದೇವರು, ಅಪ್ಪ&ಅಮ್ಮನಿಗೆ ಹೆದರುತ್ತೇನಷ್ಟೇ. ಬಿಟ್ಟರೆ ನನಗೆ ಬೇರಾವ ಭಯವಿಲ್ಲ. ಕೆಟ್ಟ ಕಮೆಂಟ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸದ ಮೂಲಕವೇ ಎಲ್ಲರದಕ್ಕೂ ಉತ್ತರಿಸಿದ್ದೇನೆ. ಹಿಂದೆ ಆಡಿಕೊಳ್ಳುತ್ತಿದ್ದವರೇ ಇವತ್ತು ನನ್ನನ್ನು ಹೊಗಳುತ್ತಿದ್ದಾರೆ' ಎನ್ನುತ್ತಾರೆ.
"ನನಗೆ ಇಬ್ಬರು ಗಾಡ್ಫಾದರ್ಸ್. ಮೊದಲು ದರ್ಶನ್ ಸರ್ ನಂತರ ಲೋಕೇಶ್ ಕನಗರಾಜ್ ಸರ್. ದರ್ಶನ್ ಸರ್ "ಬುಲ್ಬುಲ್' ಚಿತ್ರದಲ್ಲಿ ನನಗೆ ಕನ್ನಡ ಚಿತ್ರರಂಗದಲ್ಲಿ ಅವಕಾಶ ನೀಡಿದರು. ನಂತರ "ಕೂಲಿ' ಮೂಲಕ ಲೋಕೇಶ್ ನನ್ನನ್ನು ಭಾರತೀಯ ಚಿತ್ರರಂಗಕ್ಕೆ ಪರಿಚಯಿಸಿದರು' ಎನ್ನುತ್ತಾರೆ ರಚಿತಾ.
ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಬೇಲ್ ರದ್ದಾಗಿ ಇತ್ತೀಚೆಗಷ್ಟೆ ಮತ್ತೆ ಜೈಲು ಸೇರಿದ್ದಾರೆ. ಅದರ ಬೆನ್ನಲ್ಲೇ "ದ ಡೆವಿಲ್' ಚಿತ್ರದ ಬಿಡುಗಡೆಗೆ ಯಾವುದೇ ಸಮಸ್ಯೆಯಾಗದಿರಲಿ ಎಂದು ಅಭಿಮಾನಿಗಳಲ್ಲಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಇದೀಗ ಸಿನಿಮಾ ಪರ ನಿಂತಿರುವ ರಚಿತಾ, "ದರ್ಶನ್ ಸರ್ ಕೆಟ್ಟ ಳಿಗೆ. ಆದರೆ, ಇದೇ ಅಂತ್ಯವಲ್ಲ. ಎಲ್ಲರೂ ಕಾನೂನಿನ ಮುಂದೆ ತಲೆ ಬಾಗಲೇಬೇಕು. ಅವರ ಕೆಟ್ಟ ಸಮಯದಲ್ಲಿ ನಾವು ಅವರ ಜತೆ ಇಲ್ಲ ಅಂದರೆ ಅದು ತಪ್ಪಾಗುತ್ತದೆ. ಹೀಗಾಗಿ ಚಿತ್ರತಂಡದವರು ಅಥವಾ ವಿಜಯಲಕ್ಷ್ಮೀ ಅವರು ನನಗೆ ಹೇಳದಿದ್ದರೂ, ನಾನು "ದ ಡೆವಿಲ್' ಚಿತ್ರದ ಪ್ರಚಾರ ಮಾಡುತ್ತೇನೆ' ಎನ್ನುತ್ತಾರೆ ರಚಿತಾ.