ಸಿನಿವಾಣಿ

ಬಾಲಿವುಡ್​ಗೆ ಪ್ರಿಯಾಮಣಿ ಟಾಂಗ್; ದಕ್ಷಿಣದ ಬಗ್ಗೆ ನಟಿಯ ಮೆಚ್ಚುಗೆ ಮಾತು

ಬೆಂಗಳೂರು: ಹಿಂದಿ ಚಿತ್ರಗಳಲ್ಲಿ ದಕ್ಷಿಣ ಭಾರತದವರನ್ನು ಬಹಳ ಕೆಟ್ಟದಾಗಿ ತೋರಿಸುತ್ತಾರೆ ಎಂಬ ದೂರು ಬಹಳ ವರ್ಷಗಳಿಂದ ಕೇಳಿ ಬರುತ್ತಲೇ ಇದೆ. ಅದರಲ್ಲೂ ದಕ್ಷಿಣ ಭಾರತದವರು ಹಿಂದಿಯನ್ನೂ ತಮಿಳಿನ ತರಹ ಉಚ್ಛರಿಸುತ್ತಾರೆ ಎಂದು ತಮಾಷೆಯಾಗಿ ಹಲವಾರು ಚಿತ್ರಗಳಲ್ಲಿ ತೋರಿಸಲಾಗಿದ್ದು, ಈ ಬಗ್ಗೆ ಆಗಾಗ ಅಸಹನೆ ವ್ಯಕ್ತವಾಗುತ್ತಲೇ ಇರುತ್ತದೆ. ಈಗ ಪ್ರಿಯಾಮಣಿ ಸಹ ಈ ಕುರಿತು ಮಾತನಾಡಿದ್ದಾರೆ.

‘ಒಂದು ಕಾಲಕ್ಕೆ ಬಾಲಿವುಡ್​ನಲ್ಲಿ ಸಾಕಷ್ಟು ದಕ್ಷಿಣ ಭಾರತದ ನಟಿಯರಿದ್ದರು. ಶ್ರೀದೇವಿ, ಹೇಮಾ ಮಾಲಿನಿ, ರೇಖಾ, ವೈಜಯಂತಿ ಮಾಲಾ ಮುಂತಾದವರು ಬೆಳ್ಳಿ ತೆರೆಯನ್ನು ಅಕ್ಷರಶಃ ಆಳಿದ್ದರು. ಆದರೆ, ಅವೆಲ್ಲವೂ ಈಗ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, ದಕ್ಷಿಣ ಭಾರತದವರನ್ನು ಕಾಮಿಡಿಯಾಗಿ ತೋರಿಸುವ ಪರಿಪಾಠ ಹೆಚ್ಚಿದೆ. ‘ಅಯ್ಯೋ ಕೈಸಾ ಜೀ, ಕ್ಯಾ ಬೋಲ್ತಾ ಜೀ ...’ ಎಂದು ಹೇಳುವುದಕ್ಕೆ ಸೀಮಿತವಾಗಿಬಿಟ್ಟಿದೆ. ಕಾಲ ಸಾಕಷ್ಟು ಬದಲಾಗಿದ್ದರೂ, ವಿಧಾನ ಮಾತ್ರ ಬದಲಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ಒಂದು ಕಡೆ ಈ ಪರಿಸ್ಥಿತಿಯಾದರೆ, ಇನ್ನೊಂದು ಕಡೆ ದಕ್ಷಿಣದ ತಂತ್ರಜ್ಞರಿಗೆ ಬಾಲಿವುಡ್ ಚಿತ್ರಗಳಲ್ಲಿ ಹೆಚ್ಚುಹೆಚ್ಚು ಕೆಲಸ ಸಿಗುತ್ತಿರುವುದು ಖುಷಿಯ ವಿಚಾರ ಎನ್ನುತ್ತಾರೆ ಪ್ರಿಯಾಮಣಿ. ‘ಆರಂಭದ ವರ್ಷಗಳಲ್ಲಿ ದಕ್ಷಿಣದ ತಂತ್ರಜ್ಞರಿಗೆ ಬಾಲಿವುಡ್​ನಲ್ಲಿ ಬಹಳ ಬೇಡಿಕೆ ಇತ್ತು. ಬಹಳಷ್ಟು ಜನ ತಮ್ಮ ಕೆಲಸದಿಂದಲೂ ಗುರುತಿಸಿಕೊಂಡಿದ್ದರು. ಈಗ ಪುನಃ ದಕ್ಷಿಣದ ಪ್ರತಿಭೆಗಳಿಗೆ ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿದೆ’ ಎಂದು ಪ್ರಿಯಾಮಣಿ ಅಭಿಪ್ರಾಯಪಟ್ಟಿದ್ದಾರೆ. -ಏಜೆನ್ಸೀಸ್