ಬೆಂಗಳೂರು: ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು ‘ಡಿಆರ್ 56’. ಪ್ರಿಯಾಮಣಿ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಮೋಷನ್ ಟೀಸರ್ ಸಹ ಬಿಡುಗಡೆಯಾಗಿತ್ತು. ಆದರೆ, ಕರೊನಾದಿಂದ ಚಿತ್ರ ತಡವಾಗಿ, ಇದೀಗ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿದೆ. ನಾಯಕ ಕಂ ನಿರ್ವಪಕ ಪ್ರವೀಣ್ ರೆಡ್ಡಿ ಅಲಿಯಾಸ್ ಪಿಆರ್ ಹುಟ್ಟುಹಬ್ಬದ ನೆಪದಲ್ಲಿ ಯೂಟ್ಯೂಬ್ನ ಆನಂದ್ ಆಡಿಯೋ ಚಾನಲ್ನಲ್ಲಿ ಇತ್ತೀಚೆಗೆ ಚಿತ್ರದ ಟೀಸರ್ ಸಹ ಬಿಡುಗಡೆಯಾಗಿದೆ.
ಇದೊಂದು ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಆಗಿದ್ದು, ಸಮಾಜದಲ್ಲಿ ನಡೆಯುತ್ತಿರುವ ಒಂದು ವಂಚನೆಯ ಕುರಿತಾಗಿ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಈ ಚಿತ್ರದ್ದಾಗಿದೆ. ಈ ಚಿತ್ರವು ಏಕಕಾಲಕ್ಕೆ ಕನ್ನಡ ಮತ್ತು ತಮಿಳಿನಲ್ಲಿ ನಿರ್ವಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಲ್ಲಾ ಅಂದುಕೊಂಡಂತೆ ಆದರೆ, ವರ್ಷ ಮುಗಿಯುವಷ್ಟರಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಪ್ರವೀಣ್ ರೆಡ್ಡಿ ಈ ಚಿತ್ರದಲ್ಲಿ ನಟಿಸಿ, ನಿರ್ದೇಶಿಸುರುವುದಷ್ಟೇ ಅಲ್ಲ, ಕಥೆ ಹಾಗೂ ಚಿತ್ರಕಥೆಯನ್ನೂ ರಚಿಸಿದ್ದಾರೆ. ರಾಜೇಶ್ ಆನಂದ್ ಲೀಲಾ ನಿರ್ದೇಶಿಸಿರುವ ಈ ಚಿತ್ರಕ್ಕೆ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಮತ್ತು ನೊಬಿನ್ ಪಾಲ್ ಅವರ ಸಂಗೀತವಿದೆ.