ಸಿನಿವಾಣಿ

ಖಾಕಿಪ್ರಿಯಾ! ಹ್ಯಾಟ್ರಿಕ್​ ಚಿತ್ರಗಳಲ್ಲಿ ಪೊಲೀಸ್​ ಅಧಿಕಾರಿಯಾದ ಇನ್ಸ್​ಪೆಕ್ಟರ್​ ಗಿರಿಜಾ ಖ್ಯಾತಿಯ ನಟಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಭೀಮ' ಚಿತ್ರದಲ್ಲಿ ಇನ್ಸ್​ಪೆಕ್ಟರ್​ ಗಿರಿಜಾ ಪಾತ್ರದಲ್ಲಿ ಮಿಂಚಿದ್ದ ನಟಿ ಪ್ರಿಯಾ ಷಠಮರ್ಷಣ ಇದೀಗ ಹ್ಯಾಟ್ರಿಕ್​ ಚಿತ್ರಗಳಲ್ಲಿ ಖಾಕಿ ಧರಿಸಿದ್ದಾರೆ. "ಕಸ್ಟಡಿ', "ಕುಂಭ ಸಂಭವ' ಮತ್ತು "ಗಾಂಧಿ ಸ್ಕ್ವೇರ್​' ಸಿನಿಮಾಗಳಲ್ಲಿ ಖಡಕ್​ ಪೊಲೀಸ್​ ಅಧಿಕಾರಿಯಾಗಿ, ಹೊಸ ಕೇಸ್​ಗಳ ಬೆನ್ನು ಹತ್ತಿದ್ದಾರೆ. ""ಭೀಮ' ಚಿತ್ರದ ಇನ್ಸ್​ಪೆಕ್ಟರ್​ ಗಿರಿಜಾ ಪಾತ್ರಕ್ಕೆ ತುಂಬ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ಜತೆಗೆ 20ಕ್ಕೂ ಹೆಚ್ಚು ಅದೇ ರೀತಿಯ ಪೊಲೀಸ್​ ಪಾತ್ರಗಳ ಆರ್ಸ್​ ಬಂದವು. ಕಥೆ ಕೇಳಿ, ಒಂದೇ ರೀತಿಯ ಪಾತ್ರಗಳನ್ನು ಒಪ್ಪದೇ, ವಿಭಿನ್ನ ಕಥೆ, ಬೇರೆ ಬೇರೆ ಶೇಡ್​ಗಳಿರುವ ಪಾತ್ರವನ್ನು ಮಾತ್ರ ಒಪ್ಪಿಕೊಂಡೆ. "ಭೀಮ'ದಲ್ಲಿ ನೆನಪಿಗಾಗಿ ಪೊಲೀಸ್​ ಯೂನಿಾರಂ ತೆಗೆದಿಟ್ಟುಕೊಂಡಿದ್ದೆ. ಬಳಿಕ "ಕಸ್ಟಡಿ'ಗೆ ಇನ್ನೊಂದು ಯೂನಿಫಾರ್ಮ್​, "ಕುಂಭ ಸಂಭವ'ಕ್ಕೆ ಮತ್ತೊಂದು ಯೂನಿಫಾರ್ಮ್​ ತೆಗೆದುಕೊಂಡೆ. ಹೀಗೆ ನನ್ನ ಬಳಿ ಈಗ ಮೂರು ಖಾಕಿ ಯೂನಿಫಾರ್ಮ್​ಗಳಿವೆ. ಬ್ಯಾಕ್​ ಟು ಬ್ಯಾಕ್​ ಪೊಲೀಸ್​ ಪಾತ್ರಗಳಲ್ಲೇ ನಟಿಸುತ್ತಿರುವ ಕಾರಣ, ಕೆಲವೊಮ್ಮೆ ಶೂಟಿಂಗ್​ ಅಲ್ಲ ಡ್ಯೂಟಿಗೆ ಹೋಗುತ್ತಿರುವ ಫೀಲ್​ ಆಗುತ್ತದೆ. ಠಾಣೆಯಿಂದ ಠಾಣೆಗೆ ಟ್ರಾನ್ಸ್​ರ್​ ಆಗಿ, ಹೊಸ ಕೇಸ್​ ತೆಗೆದುಕೊಂಡಿರುವಂತೆ ಭಾಸವಾಗುತ್ತದೆ' ಎಂದು ನಗುತ್ತಾರೆ ಪ್ರಿಯಾ.

ಫೈಟರ್​ ಪ್ರಿಯಾ

ಜೆಜೆ ಶ್ರೀನಿವಾಸ್​ ನಟಿಸಿ, ನಿರ್ದೇಶಿಸಿರುವ "ಕಸ್ಟಡಿ' ಇದೇ ಆ. 8ರಂದು ತೆರೆಗೆಬರಲಿದೆ. "ಮಹಿಳಾ ಪ್ರಧಾನ ಚಿತ್ರವಾದರೂ ಒಂದೊಳ್ಳೆ ಕಮರ್ಷಿಯಲ್​ ಪ್ಯಾಕೇಜ್​. ನಾನು ದುರ್ಗಾಪರಮೇಶ್ವರಿ ಎಂಬ ದಕ್ಷ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಸೈಬರ್​ ಕ್ರೈಮ್​​ ಸುತ್ತ ನಡೆಯುವ ಕಥೆಯಲ್ಲಿ ಕೌಟುಂಬಿಕ, ಭಾವನಾತ್ಮಕ ಅಂಶಗಳಿವೆ. ಊಹೆಗೂ ನಿಲುಕದ ಟ್ವಿಸ್ಟ್​-ರ್ಟನ್​ಗಳಿವೆ. "ಭೀಮ' ರಿಯಲಿಸ್ಟಿಕ್​ ಆಗಿದ್ದ ಕಾರಣ ನನಗೆ ಫೈಟ್​ಗಳಿರಲಿಲ್ಲ. ಆದರೆ, "ಕಸ್ಟಡಿ'ಯಲ್ಲಿ ನನ್ನ ಪಾತ್ರವೇ ಹೀರೋ. ತರಬೇತಿ ಪಡೆದು, ರಿಹರ್ಸಲ್​ ಮಾಡಿ ಸ್ಟಂಟ್ಸ್​ ಮಾಡಿದ್ದೇನೆ. ಹೀಗಾಗಿ ಸಾಹಸ ಸನ್ನಿವೇಶಗಳು ಸವಾಲೆನಿಸಿತು' ಎಂದು ಮಾಹಿತಿ ನೀಡುತ್ತಾರೆ.

ಆಲ್ಬಂ ಸಾಂಗ್​ ಸಂಭ್ರಮ

"ಕಸ್ಟಡಿ' ಜತೆಗೆ ಪ್ರಿಯಾ ಪೊಲೀಸ್​ ಪಾತ್ರದಲ್ಲಿ ನಟಿಸುತ್ತಿರುವ "ಕುಂಭಸಂಭವ' ಮತ್ತು "ಗಾಂಧೀ ಸ್ಕ್ವೇರ್​' ಚಿತ್ರಗಳ ಶೂಟಿಂಗ್​ ಪೂರ್ಣಗೊಂಡಿದೆ. ಹಾಗೇ "ರುಧಿರವನಂ' ಸೇರಿ ಇನ್ನೂ ಎರಡು ಹೊಸ ಚಿತ್ರಗಳಿಗೆ ಅವರು ಸೈನ್​ ಮಾಡಿದ್ದಾರಂತೆ. ಇನ್ನು ರಂಗಭೂಮಿಯಿಂದ ಹಿನ್ನೆಲೆಯ ಪ್ರಿಯಾ, ಪತಿ "ಕನ್ನಡಕ್ಕಾಗಿ ಒಂದನ್ನು ಒತ್ತಿ' ಖ್ಯಾತಿಯ ನಟ ಅವಿನಾಶ್​ ಷಠಮರ್ಷಣ ಇಬ್ಬರೂ ಉತ್ತಮ ಗಾಯಕರು ಕೂಡ. ಹೀಗಾಗಿ ಈ ಜೋಡಿ "ಸೋಹಂ' ಎಂಬ ವಿಡಿಯೋ ಆಲ್ಬಂ ಮಾಡಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಕೆಲ ಹಾಡುಗಳ ಸಂಗೀತದ ಕಾರ್ಯ ಮುಗಿದಿದ್ದು, ಇತ್ತೀಚೆಗಷ್ಟೆ ಹಂಪಿಯಲ್ಲಿ ಮೊದಲ ಹಾಡಿನ ಶೂಟಿಂಗ್​ ಪೂರ್ಣಗೊಳಿಸಿದ್ದಾರೆ. "ಅವಿನಾಶ್​ಗೆ ಹಲವು ವರ್ಷಗಳಿಂದ ಮ್ಯೂಸಿಕ್​ ಬ್ಯಾಂಡ್​ ಮಾಡುವ ಆಸೆ ಇತ್ತು. ಅದೀಗ ನೆರವೇರುತ್ತಿದೆ. ಆರು ಹಾಡುಗಳು ರೆಡಿಯಾಗಿವೆ. ಭಜನೆ, ಜಾನಪದ, ಭಾವಗೀತೆ ಸೇರಿ ಎಲ್ಲ ಜಾನರ್​ ಹಾಡುಗಳನ್ನು ಮಾಡುವ ಆಲೋಚನೆ ಇದೆ' ಎನ್ನುತ್ತಾರೆ ಪ್ರಿಯಾ.