ಸಿನಿವಾಣಿ

ನೀವು ಸಲಿಂಗಕಾಮಿಯೇ? ಸದಾ ಎದುರಾಗುವ ಈ ಒಂದು ಪ್ರಶ್ನೆಗೆ ನಟಿ ಓವಿಯಾ ಕೊಟ್ಟ ಉತ್ತರ ಹೀಗಿತ್ತು…

ಚೆನ್ನೈ: ರಾಕಿಂಗ್​ ಸ್ಟಾರ್ ಯಶ್ ಜತೆಗೆ ಕಿರಾತಕ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ಓವಿಯಾ, ಅದಾದ ಬಳಿಕ ಮಿಸ್ಟರ್ ಮೊಮ್ಮಗ ಸಿನಿಮಾ ಮಾಡಿದ್ದರು. ಕನ್ನಡದಲ್ಲಿ ನಟಿಸಿದ್ದು ಕೇವಲ ಎರಡೇ ಸಿನಿಮಾ ಆದರೂ ಸೂಪರ್​ ಹಿಟ್​ ಕಿರಾತಕ ಸಿನಿಮಾದಿಂದಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿದ್ದಾರೆ. ತಮಿಳಿನಲ್ಲಿಯೇ ಹೆಚ್ಚು ಬಿಜಿಯಾಗಿದ್ದ ಒವಿಯಾ ಇದೀಗ ಅಲ್ಲೂ ಕೂಡ ಅವಕಾಶಗಳು ಇಲ್ಲದೆ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಸಿನಿಮಾಗಳ ಅವಕಾಶ ಕಡಿಮೆಯಾದ ಬಳಿಕ ಒವಿಯಾ, ತಮಿಳಿನ ವಿಜಯ್ ಚಾನೆಲ್​ನಲ್ಲಿ ಪ್ರಸಾರವಾದ ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ತಮ್ಮ ವಿಭಿನ್ನ ಮ್ಯಾನರ್​ ಮೂಲಕ ಜನಮನ್ನಣೆ ಗಳಿಸಿದರು. ಶೋ ಮುಗಿಸಿದ ಬಳಿಕವೂ ಓವಿಯಾ ಅವರಿಗೆ ಕೆಲ ಸಿನಿಮಾಗಳಲ್ಲಿ ಮತ್ತೆ ಅವಕಾಶಗಳು ಸಿಕ್ಕವು. ಆದರೆ, ಮತ್ತೆ ಅವಕಾಶಗಳು ಕಡಿಮೆಯಾದವು.

ಇದೀಗ ಬಿಗ್​ಬಾಸ್​ ಸೀಸನ್​ 7ಕ್ಕೆ ಓವಿಯಾ ಅವರು ಮತ್ತೆ ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮ್ಯಾಗಜಿನ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅನೇಕ ಪ್ರಶ್ನೆಗಳಿಗೆ ಓವಿಯಾ ಉತ್ತರ ನೀಡಿದ್ದಾರೆ.

ನಾನು ಸಲಿಂಗಕಾಮಿಯಲ್ಲ

ನೀವಿನ್ನೂ ಮದುವೆ ಆಗಿಲ್ಲದಿರುವುದರಿಂದ ಕೆಲವು ನಿಮ್ಮನ್ನು ಸಲಿಂಗಕಾಮಿ ಎಂದು ತಿಳಿದಿದ್ದಾರೆ. ಇದು ನಿಜವೇ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಓವಿಯಾ, ನನಗೆ ಸದಾ ಎದುರಾಗುವ ಪ್ರಶ್ನೆ ಇದು. ನಾನು ಸಲಿಂಗಕಾಮಿಯಲ್ಲ. ಓರ್ವ ನಟಿಯಾಗಿ ಇಂತಹ ವದಂತಿಗಳು ಸಾಮಾನ್ಯವಾಗಿದೆ. ಆದರೆ, ಇಂತಹ ವದಂತಿಗಳುನ್ನು ಎದುರಿಸುವುದು ಕಷ್ಟಕರ. ಆದರೂ, ಇಂತಹವುಗಳನ್ನು ನಿರ್ಲಕ್ಷಿಸುತ್ತೇನೆಂದು ಓವಿಯಾ ಹೇಳಿದರು.

ನಾನು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ

ಕೆಲವರು ಸಾರ್ವಜನಿಕವಾಗಿ ಹೀರೋಯಿನ್​ಗಳ ಮೈಮುಟ್ಟುತ್ತಾರೆ ಮತ್ತು ಅನುಚಿತವಾಗಿ ವರ್ತನೆ ಮಾಡುತ್ತಾರೆ. ಇದಕ್ಕೆ ಕಾರಣ ಅಂಥವರನ್ನು ಅವರ ಪಾಲಕರು ಸರಿಯಾಗಿ ಬೆಳೆಸಿರುವುದಿಲ್ಲ ಎಂದು ಹೇಳಿದರು. ಅಲ್ಲದೆ, ನನ್ನನ್ನು ದ್ವೇಷಿಸುವ ಜಾಗದಲ್ಲಿ ನಾನು ಇರುವುದಿಲ್ಲ. ತಕ್ಷಣ ನಾನು ಅಲ್ಲಿಂದ ಹೊರಡುತ್ತೇನೆ. ಮೋಸ ಮಾಡಿದವರು ಯಾರೆಂದು ನೇರವಾಗಿ ಹೇಳಿಬಿಡುತ್ತೇನೆ. ನಾನು ಯಾರೊಂದಿಗೂ ಹೆಚ್ಚು ಬೆರೆಯುವುದಿಲ್ಲ. ನನಗೆ ಸತ್ಯವಾದವರ ಜೊತೆ ನಾನಿದ್ದೇನೆ ಎಂದರು.

ಯಾವುದೇ ನಿರೀಕ್ಷೆಗಳಿಲ್ಲ

ದೊಡ್ಡ ದೊಡ್ಡ ನಾಯಕ ನಟರ ಜೊತೆ ನಟಿಸುವ ಆಸೆ ನನಗಿಲ್ಲ. ನನಗೆ ಸಿಗುವ ಅವಕಾಶಗಳ ಬಗ್ಗೆಯೇ ದೊಡ್ಡದಾಗಿ ಯೋಚಿಸುತ್ತೇನೆ. ನಾನು ಯಾವುದೇ ನಿರೀಕ್ಷೆಗಳಿಲ್ಲದೆ ಸಂತೋಷವಾಗಿದ್ದೇನೆ ಎಂದು ಹೇಳಿದರು.

ಅಂದಹಾಗೆ ಮಲಯಾಳಂ ನಟಿ ಓವಿಯಾ ಅವರು 2010ರಲ್ಲಿ ಕಲಾವಾಣಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಮದಯನೈ ಕೂಟಂ, ಕಾಲಕಲಾಪು, ಮರೀನಾ, ಮುದರ್ ಕೂಡಂ, ಯಾಮಿರುಕಾ ಪಯಮೆಂ, 90 ಎಂಎಲ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಸಿನಿಮಾಗಳ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)