ಕಳೆದ ಆಗಸ್ಟ್ 18ರಂದು ಪ್ಯಾನ್ ಇಂಡಿಯಾ ‘ಕಣ್ಣಪ್ಪ’ ಚಿತ್ರದ ಮುಹೂರ್ತ ಶ್ರೀ ಕಾಳಹಸ್ತಿಯಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮುಕೇಶ್ ಕುಮಾರ್ ಸಿಂಗ್ ಈ ಪೌರಾಣಿಕ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು, ತೆಲುಗು ನಟ ವಿಷ್ಣು ಮಂಚು ಮತ್ತು ಬಾಲಿವುಡ್ ನಟಿ ಕೃತಿ ಸನನ್ ಸಹೋದರಿ ನೂಪುರ್ ಸನನ್ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ನಾಯಕ, ನಾಯಕಿ ಇಬ್ಬರೂ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ಆದರೆ, ಇನ್ನೇನು ಚಿತ್ರದ ಶೂಟಿಂಗ್ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಚಿತ್ರತಂಡದಿಂದ ನೂಪುರ್ ಹೊರನಡೆದಿದ್ದಾರೆ.
ಈ ಬಗ್ಗೆ ವಿಷ್ಣು ಮಂಚು, ‘ಡೇಟ್ಸ್ ಸಮಸ್ಯೆಯಿಂದಾಗಿ ನೂಪರ್ ಚಿತ್ರದಿಂದ ಹೊರನಡೆಯುತ್ತಿದ್ದಾರೆ ಎಂದು ತಿಳಿಸಲು ಬೇಸರವಾಗುತ್ತಿದೆ. ಅವರನ್ನು ನಾವು ಮಿಸ್ ಮಾಡಿಕೊಳ್ಳಲಿದ್ದೇವೆ. ಹೊಸ ನಾಯಕಿಯ ಹುಡುಕಾಟವೂ ಶೂರುವಾಗಿದೆ. ನೂಪುರ್‌ಗೆ ಶುಭವಾಗಲಿ, ಮುಂದೆ ಒಟ್ಟಿಗೆ ಕೆಲಸ ಮಾಡುವ ವಿಶ್ವಾಸವಿದೆ’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ರವಿತೇಜ ನಾಯಕನಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಟೈಗರ್ ನಾಗೇಶ್ವರ್ ರಾವ್’ ಮೂಲಕ ನೂಪುರ್ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದು, ಚಿತ್ರ ಇದೇ ಅ. 20ರಂದು ಬಿಡುಗಡೆಯಾಗಲಿದೆ.
-ಏಜೆನ್ಸೀಸ್