ಬೆಂಗಳೂರು: ಸಿನಿಮಾದಿಂದ ಕೊಂಚ ಅಂತರ ಕಾಯ್ದುಕೊಂಡಿರುವ ನಟಿ ಮಾನ್ಯಾ ನಾಯ್ಡು, ಕನ್ನಡಿಗರಿಗೆ ಗೊತ್ತಿರುವ ಮುಖ. ಇದೀಗ ದೂರದ ಅಮೆರಿಕಾದಲ್ಲಿ ಕುಳಿತುಕೊಂಡೇ ಕರೊನಾ ಕಷ್ಟಕಾಲದಲ್ಲಿ ಕನ್ನಡಿಗರ ಸಹಾಯಕ್ಕೆ ಮುಂದೆ ಬಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಆರಂಭಿಸಿರುವ ನಿಧಿ ಸಂಗ್ರಹಣಾ ಕಾರ್ಯಕ್ಕೆ ದೇಣಿಗೆ ರೂಪದಲ್ಲಿ ಒಂದು ಲಕ್ಷ ಹಣ ನೀಡಿದ್ದಾರೆ.
ಈಗಾಗಲೇ ಉಪೇಂದ್ರ ಅವರ ಕಾರ್ಯಕ್ಕೆ ಕೇವಲ ಚಿತ್ರರಂಗ ಮಾತ್ರವಲ್ಲದೆ, ಹಲವು ಉದ್ಯಮಿಗಳೂ ಸಹ ಕೈ ಜೋಡಿಸಿದ್ದು, ಹಣದ ರೂಪದಲ್ಲಿ, ಧವಸ ಧಾನ್ಯದ ರೂಪದಲ್ಲಿ ದೇಣಿಗೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ ಯಾವ ಕಾರ್ಯಕ್ಕೆ ಎಂಬುದನ್ನು ದಾನಿಗಳಿಂದ ಮಾಹಿತಿ ಪಡೆದು, ಅವರು ಹೇಳಿದಂತೆ ವಿತರಣೆ ಮಾಡುವ ಜವಾಬ್ದಾರಿಯನ್ನು ಉಪೇಂದ್ರ ಹೊತ್ತಿದ್ದಾರೆ.
ಈಗಾಗಲೇ ಚಂದನವನದ ಹಿರಿಯ ನಟಿ ಬಿ. ಸರೋಜಾದೇವಿ 4 ಲಕ್ಷ ದೇಣಿಗೆ ನೀಡಿದ್ದಾರೆ. ಸಾಧುಕೋಕಿಲ ಎರಡೂವರೆ ಲಕ್ಷ ನೀಡಿದ್ದಾರೆ. ಪವನ್ ಒಡೆಯರ್, ಶೋಭ್ರಾಜ್ ಸೇರಿ ಸಾಕಷ್ಟು ಕಲಾವಿದರು ಈ ಸೇವೆಗೆ ಕೈ ಜೋಡಿಸಿದ್ದು, ಇದೀಗ ದೂರದ ಅಮೆರಿಕದಲ್ಲಿಯೇ ನೆಲೆಸಿರುವ ಮಾನ್ಯಾ ನಾಯ್ಡು ಒಂದು ಲಕ್ಷ ಮೊತ್ತವನ್ನು ನೀಡಿದ್ದಾರೆ.