ಬೆಂಗಳೂರು: ಐಪಿಎಲ್ 18ರ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆ ಸಲ್ಲಿಸಲು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವದಲ್ಲಿ ಕಾಲ್ತುಳಿತ ಉಂಟಾಗಿ 11 ಜನರು ಅಸುನೀಗಿದ್ದರು. ಈ ದುರಂತಕ್ಕೆ ಇಡೀ ದೇಶವೇ ಮರುಗಿತ್ತು. ಅಲ್ಲದೇ ಹಲವಾರು ಚಿತ್ರ ನಟ-ನಟಿಯರು ಸಂತಾಪ ಸೂಚಿಸಿದ್ದರು. ಇವರಲ್ಲಿ ‘ವಜ್ರಕಾಯ’ ನಟಿ ಕಾರುಣ್ಯ ರಾಮ್ ಘಟನೆಗೆ ವಿಷಾದಿಸಿದ್ದು, ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ವಿಡಿಯೋ ಮೂಲಕ ಹೇಳಿರುವ ಅವರು, ‘ನಮ್ಮ ಆರ್‌ಸಿಬಿ ಕಪ್ ನಮ್ಮದಾಯಿತು. ಆದರೆ, ಆ ಖುಷಿ 24 ಗಂಟೆ ಕೂಡ ಉಳಿಯಲಿಲ್ಲ. ವಿಜಯೋತ್ಸವದಲ್ಲಿ 11 ಯುವಕರು ಸತ್ತಿದ್ದಾರೆ. ಇದಕ್ಕೆಲ್ಲಾ ಯಾರು ಹೊಣೆ. ಯಾರೇ ಆಗಲಿ ಸ್ಟಾರ್‌ಡಮ್ ಅನುಭವಿಸಬೇಕಾದರೆ ಅದಕ್ಕೆ ಕಾರಣ ಸಾಮಾನ್ಯಜನರು. ಆ ಜನಸಾಮಾನ್ಯರಿಗೆ ರಕ್ಷಣೆ ಇಲ್ಲವಾದರೆ ಹೇಗೆ? ಯಾಕೆ ಅಷ್ಟು ಬೇಗ ಈ ಕಾರ್ಯಕ್ರಮ ಆಯೋಜಿಸಬೇಕಿತ್ತು ಎಂಬುದೇ ನನ್ನ ಪ್ರಶ್ನೆ. ಸಾವಿಗೀಡಾದ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಈ ಪ್ರಕರಣದ ಬಗ್ಗೆ ಸರಿಯಾಗಿ ತನಿಖೆಯಾಗಿ, ಈ ಕೃತ್ಯಕ್ಕೆ ಕಾರಣವಾದವರಿಗೆ ಘೋರ ಶಿಕ್ಷೆಯಾಗಬೇಕು. ಅಧಿಕಾರಿಗಳ ತಲೆದಂಡ ಹಾಗೂ ಮ್ಯಾಜಿಸ್ಟ್ರೇಟ್ ತನಿಖೆಗಿಂತ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಪ್ರವೃತ್ತರಾಗಬೇಕಿದೆ. ಹಾಗೆಯೇ ಆರ್‌ಸಿಬಿ ಪ್ರತಿ ಆಟಗಾರನೂ ಮೃತರ ಕುಟುಂಬಗಳ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಬೇಕಿದೆ’ ಎಂದು ಒತ್ತಾಯಿಸಿದ್ದಾರೆ. ಕಾರುಣ್ಯರ ಈ ಕರೆಗೆ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.