ಬೆಂಗಳೂರು: ಸ್ಯಾಂಡಲ್‌ವುಡ್ ತಾರಾ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಪ್ರವಾಸ ಪ್ರಿಯರು. ಈಗಾಗಲೇ ಈ ಜೋಡಿ ಅಮೆರಿಕ, ಸಿಂಗಾಪುರ ಸೇರಿ ಹಲವಾರು ದೇಶಗಳನ್ನು ಸುತ್ತಿದೆ. ಆದರೆ, ಕಳೆದ ಅಕ್ಟೋಬರ್‌ನಲ್ಲಿ ಹರ್ಷಿಕಾ ಪೂಣಚ್ಚ ತಾಯಿಯಾದ ಬಳಿಕ ಯಾವುದೇ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ. ಇದೀಗ ಪುತ್ರಿ ತ್ರಿದೇವಿ ಪೊನ್ನಕ್ಕಗೆ ಎಂಟು ತಿಂಗಳು ತುಂಬಿದ್ದು, ಇದೇ ಸಂಭ್ರಮಕ್ಕಾಗಿ ಈ ತಾರಾ ಜೋಡಿ ಮಗಳ ಜತೆ ಮೊದಲ ಅಂತಾರಾಷ್ಟ್ರೀಯ ಪ್ರವಾಸ ಮಾಡಿದ್ದಾರೆ. ಎರಡು ವಾರಗಳ ಕಾಲ ಶ್ರೀಲಂಕಾ, ಥಾಯ್ಲೆಂಡ್ ಹಾಗೂ ವಿಯೆಟ್ನಾಂ ದೇಶಗಳಿಗೆ ಪ್ರವಾಸ ಕೈಗೊಂಡಿದ್ದ ಈ ಜೋಡಿ ಇತ್ತೀಚೆಗೆ ಸ್ವದೇಶಕ್ಕೆ ಮರಳಿದ್ದಾರೆ. ಮೂರು ದೇಶಗಳ ಪ್ರವಾಸದ ಅನುಭವಗಳನ್ನು ನಟಿ ಹರ್ಷಿಕಾ ಪೂಣಚ್ಚ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ. ‘ನಾನು ಮತ್ತು ಭುವನ್ ಮದುವೆ ಮುಂಚೆ ಹಾಗೂ ಬಳಿಕವೂ ಆರು ತಿಂಗಳಿಗೊಮ್ಮೆ ಯಾವುದಾದರೂ ದೇಶಕ್ಕೆ ಪ್ರವಾಸ ಹೋಗುತ್ತಿದ್ದೆವು. ಮಗಳ ಬಂದ ಬಳಿಕ ಪ್ರವಾಸಕ್ಕೆ ಹೋಗಲು ಆಗಿರಲಿಲ್ಲ. ಆದರೆ, ಭುವನ್ ಮನೆಯಲ್ಲಿ ಸುಮ್ಮನೆ ಕೂರುವವರಲ್ಲ. ಮಗಳಿಗೆ ಎಂಟು ತಿಂಗಳು ತುಂಬಿತು ಎಂದು ಅದೇ ಸಂಭ್ರಮದಲ್ಲಿ ಮೂರು ದೇಶಗಳಿಗೆ ವಿಮಾನ ಟಿಕೆಟ್ ಬುಕ್ ಮಾಡಿದರು. ಈ ಹಿಂದೆ ನಾವು ಥಾಯ್ಲೆಂಡ್, ವಿಯೆಟ್ನಾಂಗೆ ಹಲವು ಬಾರಿ ಹಾಗೂ ಶ್ರೀಲಂಕಾಕ್ಕೆ ಮೂರು ಬಾರಿ ಹೋಗಿದ್ದರೂ, ನಮಗೂ ಹಾಗೂ ಮಗಳಿಗೆ ವಾತವರಣ ಅನುಕೂವಾಗುತ್ತದೆಂದು ಅದೇ ದೇಶಗಳನ್ನು ಆಯ್ಕೆಮಾಡಿಕೊಂಡೆವು. ಮೊದಲು ಶ್ರೀಲಂಕಾದ ಕೊಲೊಂಬೊ ಸುತ್ತಾಡಿದೆವು. ಎರಡು-ಮೂರು ವರ್ಷಗಳ ಹಿಂದೆ ಈ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಆದರೆ, ಇದೀಗ ಸುಧಾರಿಸಿದೆ. ಅಲ್ಲಿನ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕೊಲಂಬೊ ಪ್ರವಾಸ ಎರಡು ದಿನವಾದರೂ ಒಳ್ಳೆಯ ಅನುಭವ ನೀಡಿತು’ ಎಂದು ಅನುಭವಗಳನ್ನು ಹಂಚಿಕೊಂಡರು.
ವಿಯೆಟ್ನಾಂನ ಫುಕಾಕ್ ನಗರ: ವಿಯೆಟ್ನಾಂ ಹಾಗೂ ಥಾಯ್ಲೆಂಡ್ನ ಪ್ರವಾಸದ ಬಗ್ಗೆ ಹರ್ಷಿಕಾ, ‘ನನಗೆ ಥಾಯ್ ಫುಡ್‌ಗಳೆಂದರೆ ಇಷ್ಟ. ಹಾಗೆಯೇ ಅದು ಕಡಲತಡಿಯ ನಾಡು. ಅಲ್ಲಿನ ಬೀಚ್‌ಗಳಲ್ಲಿ ನನಗೆ ಸುಂದರ ಅನುಭವಗಳಿವೆ. ಆ ಕಾರಣಕ್ಕಾಗಿ ಪದೇ ಪದೇ ಥೈಲ್ಯಾಂಡ್ ಪ್ರವಾಸ ಮಾಡುತ್ತೇನೆ. ಇನ್ನು ಈ ಹಿಂದೆ ವಿಯೆಟ್ನಾಂನ ಅನಾಯ್ ಹಾಗೂ ಹೋ ಚಿ ಮಿನ್ಹಾ ಪ್ರದೇಶಕ್ಕೆ ಹೋಗಿದ್ದೆವು, ಆದರೆ ಫುಕಾಕ್ ನಗರಕ್ಕೆ ಹೋಗಿರಲಿಲ್ಲ. ಆ ನಗರದ ಬಗ್ಗೆ ತುಂಬಾ ಕೇಳಿದ್ದೆ. ಹಾಗಾಗಿ, ಈ ಬಾರಿ ಫುಕಾಕ್ ನಗರಕ್ಕೆ ತೆರಳಿದ್ದೆವು. ಇದೊಂದು ದ್ವೀಪ ಪ್ರದೇಶ. ಇಲ್ಲಿ ಡಿಸ್ನಿ ಲ್ಯಾಂಡ್ ತರ ಪ್ರದೇಶವಾದ ಕಾರಣ ಎಲ್ಲರಿಗೂ ಇಷ್ಟವಾಗುತ್ತದೆ. ಸಾರಿ ಕೂಡ ಒಳ್ಳೆಯ ಅನುಭವ ನೀಡಿತು. ಮಗಳು ತ್ರಿದೇವಿ ಜತೆ ನಮ್ಮ ಮೊದಲ ಅಂತಾರಾಷ್ಟ್ರೀಯ ಹಲವು ಸವಿ ನೆನಪುಗಳಿಗೆ ಕಾರಣವಾಯಿತು’ ಎಂದು ಖುಷಿ ಹಂಚಿಕೊಂಡ ಹರ್ಷಿಕಾ, ‘ಜೀವನದ ಒತ್ತಡಗಳಿಂದ ಹೊರಬಂದು ನಮ್ಮ ಮೊದಲ ಸ್ಥಿತಿಗೆ ಬರಬೇಕಾದರೆ ಪ್ರವಾಸ ಅತ್ಯುತ್ತಮ ಆಯ್ಕೆ’ ಎಂದು ಅಭಿಪ್ರಾಯ ಹಂಚಿಕೊಳ್ಳುತ್ತಾರೆ.
ಮುಂದಿನ ಸಿನಿಮಾಗಳು: ಹರ್ಷಿಕಾ ಪೂಣಚ್ಚ ‘ಚಿ.ಸೌಜನ್ಯ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. ಸದ್ಯ ಇದರ ಸ್ಕ್ರಿಪ್ಟ್ ನಡೆಯುತ್ತಿದ್ದು, ಈ ಕಥೆಗಾಗಿ ರೀಸರ್ಚ್ ನಡೆಸುತ್ತಿದ್ದಾರೆ. ಇದರ ಜತೆಗೆ ಅವರು ನಟಿಸಿರುವ ಕನ್ನಡದ ‘ಕಾಲನಾಗಿಣಿ’, ‘ತಾಯತ’ ಹಾಗೂ ‘ದೃಷ್ಟಿ’ ಚಿತ್ರಗಳು ಬಿಡುಗಡೆ ಹಂತದಲ್ಲಿವೆ. ಇನ್ನು ರಿತೇಶ್ ಪಾಂಡೆಗೆ ಜೋಡಿಯಾಗಿರುವ ಭೋಜಪುರಿ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.