Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಒಂದು ಫೋಟೋದಲ್ಲಿ ಹುಡುಗನಂತೆ ಹೇರ್ಸ್ಟೈಲ್ ಮಾಡಿಸಿಕೊಂಡಿರುವ ಪುಟ್ಟ ಬಾಲಕಿ ಮತ್ತು ಇನ್ನೊಂದು ಫೋಟೋದಲ್ಲಿ ನೃತ್ಯ ಭಂಗಿಯಲ್ಲಿ ನಿಂತಿರುವ ಹುಡುಗಿಯನ್ನು ಕಾಣಬಹುದು. ಎರಡೂ ಫೋಟೋದಲ್ಲಿರುವ ಪುಟ್ಟ ಹುಡುಗಿ ಇಂದು ಪ್ಯಾನ್ ಇಂಡಿಯಾ ಮಟ್ಟ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಕನ್ನಡದ ನಟಿ ಈಕೆ. ಈಗಾಗಲೇ ತಮಿಳು ಹಾಗೂ ತೆಲುಗಿಗೆ ಕಾಲಿಟ್ಟಿರುವ ಈ ಬೆಡಗಿ ಬಾಲಿವುಡ್ ಲೋಕಕ್ಕೂ ಕಾಲಿಡುವ ದಿನಗಳು ದೂರವಿಲ್ಲ ಎನ್ನಬಹುದು. ಇತ್ತೀಚೆಗೆ ಅವರು ನಟಿಸಿದ ಕನ್ನಡ ಸಿನಿಮಾವೊಂದು ಬಿಡುಗಡೆಯಾಗಿದ್ದು ರಾಷ್ಟ್ರ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ನಮ್ಮ ಕನ್ನಡದ ರುಕ್ಕು ಅಲಿಯಾಸ್ ರುಕ್ಮಿಣಿ ವಸಂತ್.
ಅಂದಹಾಗೆ, ರುಕ್ಮಿಣಿ ವಸಂತ್ ಅವರು 1996, ಡಿಸೆಂಬರ್ 10ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಕರ್ನಲ್ ವಸಂತ್ ವೇಣುಗೋಪಾಲ್. ಇವರು ಕರ್ನಾಟಕದ ಮೊದಲ ಅಶೋಕ ಚಕ್ರ ಪುರಸ್ಕಾರ ವಿಜೇತ. ತಾಯಿ ಸುಭಾಷಿಣಿ ವಸಂತ್ ಖ್ಯಾತ ಭರತನಾಟ್ಯ ನೃತ್ಯಗಾರ್ತಿಯಾಗಿದ್ದಾರೆ. ಬಾಲ್ಯದಲ್ಲಿ ಆರ್ಮಿ ಸ್ಕೂಲ್, ಏರ್ ಫೋರ್ಸ್ ಸ್ಕೂಲ್ ಮತ್ತು ಸೆಂಟರ್ ಫಾರ್ ಲರ್ನಿಂಗ್‌ನಲ್ಲಿ ಶಿಕ್ಷಣ ಪಡೆದ ರುಕ್ಮಿಣಿ, ಲಂಡನ್‌ನ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್‌ನಲ್ಲಿ ಅಭಿನಯದಲ್ಲಿ ಪದವಿ ಪಡೆದರು. ಈ ಮೂಲಕ ತಮ್ಮ ಕುಟುಂಬದ ಸೇವಾ ಮತ್ತು ಕಲಾ ಪರಂಪರೆಯನ್ನು ಮುಂದುವರಿಸುತ್ತಾ ಚಿತ್ರರಂಗಕ್ಕೆ ಧುಮುಕಿದರು.
ರುಕ್ಮಿಣಿ ವಸಂತ್‌ರ ಮೊದಲ ಚಿತ್ರ ಬೀರ್‌ಬಲ್ ಟ್ರಯಾಲಜಿ. ಇದು 2019ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಈ ಸಿನಿಮಾವನ್ನು ಎಂ.ಜಿ. ಶ್ರೀನಿವಾಸ್ ನಿರ್ದೇಶಿಸಿ, ನಟಿಸಿದ್ದಾರೆ. ಅದೇ ವರ್ಷ ಹಿಂದಿಯ 'ಅಪ್‌ಸ್ಟಾರ್ಟ್ಸ್' ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಪ್ರವೇಶಿಸಿದರು. ರುಕ್ಮಿಣಿ ಅವರಿಗೆ ನಿಜವಾದ ಯಶಸ್ಸು ಸಿಕ್ಕಿದ್ದು 2023ರಲ್ಲಿ ತೆರೆಕಂಡ 'ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಎ' ಮತ್ತು 'ಸೈಡ್ ಬಿ' ಚಿತ್ರಗಳ ಮೂಲಕ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜತೆ ನಟಿಸಿದರು. ಈ ಚಿತ್ರಗಳಲ್ಲಿ ಪ್ರಿಯಾ ಪಾತ್ರದಲ್ಲಿ ರುಕ್ಮಿಣಿ ಅವರ ಅಭಿನಯ ಒಳ್ಳೆಯ ಯಶಸ್ಸನ್ನು ತಂದಿತು. ಅಲ್ಲದೆ, ಫಿಲ್ಮ್‌ಫೇರ್ ಕ್ರಿಟಿಕ್ಸ್ ಅವಾರ್ಡ್ ಕೂಡ ಸಿಕ್ಕಿತು. ಇದರ ಜೊತೆಗೆ 'ಬಾನ ದಾರಿಯಲ್ಲಿ' ಸಿನಿಮಾದಲ್ಲಿ ಗಣೇಶ್ ಜತೆ ನಟಿಸಿ ಗಮನ ಸೆಳೆದರು.
2024ರಲ್ಲಿ 'ಬಗೀರ' ಮತ್ತು 'ಭೈರತಿ ರಾಣಗಲ್' ಚಿತ್ರಗಳು ವಾಣಿಜ್ಯ ಯಶಸ್ಸು ತಂದರೆ, ತೆಲುಗಿನಲ್ಲಿ 'ಅಪ್ಪುಡೊ ಇಪ್ಪುಡೊ ಎಪ್ಪುಡೊ' ಸಿನಿಮಾದಲ್ಲಿ ನಿಖಿಲ್ ಸಿದ್ಧಾರ್ಥನೊಂದಿಗೆ ಡೆಬ್ಯೂ ಮಾಡಿದರು. 2025ರಲ್ಲಿ ತಮಿಳಿನ 'ಏಸ್' (ವಿಜಯ್ ಸೇತುಪತಿ) ಮತ್ತು 'ಮದರಾಸಿ' (ಶಿವಕಾರ್ತಿಕೇಯನ್) ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರದಲ್ಲಿ ಅವರ ಪಾತ್ರಗಳು ಪ್ರಶಂಸೆಗೆ ಪಾತ್ರವಾದವು. 'ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ಕನಕವತಿ ಪಾತ್ರದಲ್ಲಿ ಅವರ ಅಭಿನಯ ಮತ್ತು ಸಂಭಾಷಣೆಗಳು ಅತ್ಯಂತ ಯಶಸ್ವಿಯಾದವು. ಕಾಂತಾರಾದಿಂದ ಭಾರಿ ಯಶಸ್ಸನ್ನು ರುಕ್ಮಿಣಿ ಅವರು ಗಳಿಸಿದ್ದಾರೆ. ಇದೀಗ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ನಟ ಯಶ್ ಜೊತೆ ನಟಿಸುತ್ತಿದ್ದಾರೆ. (ಏಜೆನ್ಸೀಸ್)