ಸಿನಿವಾಣಿ

ಪ್ಯಾನ್‌ವರ್ಲ್ಡ್ ನಟಿ ಕ್ಯಾಥರೀನ್: ಜಾಗತಿಕವಾಗಿ ಮೂಡಿಬರುವ ‘ಫಣಿ’ಯಲ್ಲಿ ನಟಿಸುತ್ತಿದ್ದಾರೆ ‘ಶಂಕರ್ ಐಪಿಎಸ್’ ನಟಿ

ಕನ್ನಡ ಸಿನಿಮಾ ಮೂಲಕವೇ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ಪರಭಾಷೆ ನಟಿಯರ ಪಟ್ಟಿಯೇ ಇದೆ. ಅದರಲ್ಲಿ ಕ್ಯಾಥರೀನ್ ಟ್ರೆಸಾ ಒಬ್ಬರು. ಮಲಯಾಳಿ ಮೂಲದ ಕ್ಯಾಥರೀನ್ ಚಿತ್ರರಂಗಕ್ಕೆ ಬರುವ ಮುಂಚೆ ಮಾಡೆಲಿಂಗ್‌ನಲ್ಲಿ ಜನಪ್ರಿಯರಾಗಿದ್ದರು. 2010ರಲ್ಲಿ ತೆರೆಕಂಡಿದ್ದ ದುನಿಯಾ ವಿಜಯ್ ನಟನೆಯ ‘ಶಂಕರ್ ಐಪಿಎಸ್’ ಚಿತ್ರದ ಮೂಲಕ ಕ್ಯಾಥರೀನ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ‘ವಿಷ್ಣು’, ಉಪೇಂದ್ರ ನಟನೆಯ ‘ಗಾಡ್ ಫಾದರ್’ನಲ್ಲಿ ಕಾಣಿಸಿಕೊಂಡಿದ್ದರಾದರೂ, ಮುಂದೆ ಭವಿಷ್ಯ ಕಟ್ಟಿಕೊಂಡಿದ್ದು ಮಾತ್ರ ತೆಲುಗು, ತಮಿಳಿನಲ್ಲಿ. ತೆಲುಗಿನ ‘ಇದ್ದರಮ್ಮಾಯಿಲುತೊ’,‘ರುದ್ರಾಮದೇವಿ’, ‘ಸರೈನೊಡು’, ‘ವಾಲ್ಟೇರ್ ವೀರಯ್ಯ’ ಹಾಗೂ ತಮಿಳಿನ ‘ಮದ್ರಾಸ್’, ‘ಕಥಾನಾಯಗನ್’, ‘ಆರುವುಮ್’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂತಹ ಹಿಟ್ ಚಿತ್ರಗಳಲ್ಲಿ ನಟಿಸಿರುವ ಕ್ಯಾಥರೀನ್ ಟ್ರೆಸಾ ಇದೀಗ ಮತ್ತೊಂದು ಮಹತ್ವದ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ. ಅದುವೇ ‘ಣಿ’. ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮೂಡಿಬರಲಿರುವ ಥ್ರಿಲ್ಲರ್ ಕಥಾ ಹಂದರದಲ್ಲಿ ಅವರು ಪ್ರಮುಖ ಪಾತ್ರದಲ್ಲಿದ್ದಾರೆ. ತೆಲುಗಿನ ‘ಬಾಸ್’, ‘ಶ್ರೀರಾಮ್’, ‘ನೇನುನ್ನಾನು’ ಸೇರಿ ಹಲವು ಹಿಟ್ ಚಿತ್ರಗಳ ನಿರ್ದೇಶಕ ಡಾ.ವಿ.ಎನ್.ಆದಿತ್ಯ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಹಾಗೂ ತಮಿಳು ಸೇರಿ ಇತರ ಜಾಗತಿಕ ಭಾಷೆಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಹಿರಿಯ ನಿರ್ದೇಶಕ ಕೆ.ರಾಘವೇಂದ್ರ ರಾವ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಮಹೇಶ್ ಶ್ರೀರಾಮ್ ಕಲಾಬಳಗದಲ್ಲಿದ್ದಾರೆ. ಡಾ.ಮೀನಾಕ್ಷಿ ಅನಿಪಿಂಡಿ ಸಂಗೀತ, ಕೆ. ಬುಜ್ಜಿ, ಸಾಯಿಕಿರಣ್ ಐನಂಪುಡಿ ಛಾಯಾಗ್ರಹಣ ಹಾಗೂ ಲಾಸ್ ಏಂಜಲೀಸ್‌ನ ಹೆನ್ರಿ ಬೆವರ್ಲಿ ಫಿಲಂ ಸಂಸ್ಥೆಯ ವಿಜಿಎಫ್​ ವರ್ಕ್ ಚಿತ್ರಕ್ಕಿದೆ.