ಸಿನಿವಾಣಿ

ಸಮರಕಲೆ ತಯಾರಿ, ಬೈಕ್​ ಮೇಲೆ ಸವಾರಿ; ದ್ವಿಚಕ್ರದಲ್ಲೇ ಭೂಮಿ ಸುತ್ತುತ್ತಿದ್ದಾರೆ ನಟಿ ಭೂಮಿ ಶೆಟ್ಟಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಕಿನ್ನರಿ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ಭೂಮಿ ಶೆಟ್ಟಿ, ನಂತರ "ಬಿಗ್​ಬಾಸ್​ ಕನ್ನಡ ಸೀಸನ್​ 7'ರಲ್ಲಿ ಸ್ಪರ್ಧಿಸಿದ್ದರು. ಕಿರುತೆರೆಯಲ್ಲಿ ಬಿಜಿಯಾಗಿರುವಾಗಲೇ "ಇಕ್ಕಟ್​' ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಜತೆಗೆ ತೆಲುಗಿನಲ್ಲೂ ಕಿರುತೆರೆ, ಹಿರಿತೆರೆಯಲ್ಲಿ ಮಿಂಚಿದ್ದಾರೆ. ಅದರ ಜತೆಗೆ ಕೆಲ ದಿನಗಳಿಂದ ಸಮರಕಲೆ ತರಬೇತಿ ಕೂಡ ಪಡೆಯುತ್ತಿದ್ದಾರೆ.

ಹೊಸ ವರ್ಷಕ್ಕೆ ಹೊಸ ಹವ್ಯಾಸ ಪ್ರಾರಂಭಿಸಿರುವ ಬಗ್ಗೆ ವಿಜಯವಾಣಿ ಜತೆ ಮುಕ್ತವಾಗಿ ಮಾತಿಗಿಳಿದ ಭೂಮಿ, "ವರ್ಕೌಟ್​ ಪ್ರಾರಂಭಿಸಿದ್ದು ಅನಿರೀತ. ಆದರೆ, ಅದರತ್ತ ಒಲವು ಹೆಚ್ಚುತ್ತಾ ಹೋಯಿತು. ಈಗ ಫಿಟ್ನೆಸ್​ ನನ್ನ ಜೀವನದ ಪ್ರಮುಖ ಭಾಗವಾಗಿದೆ. ಹೀಗಾಗಿಯೇ ಕಳೆದ ವರ್ಷ ವಿಪಾಸನಾ ಕೋರ್ಸ್​ ಮಾಡಿದೆ. ಈ ವರ್ಷದ ಪ್ರಾರಂಭದಿಂದಲೇ ಏನಾದರೂ ಹೊಸತನ್ನು ಕಲಿಯಬೇಕು ಅಂತನ್ನಿಸಿದ ಕಾರಣ ಮ್ಯೂ ಥಾಯ್​ ತರಬೇತಿ ಪಡೆಯುತ್ತಿದ್ದೇನೆ. ಥಾಯ್ಲೆಂಡಿನಲ್ಲಿ ಒಂದು ವಾರದ ಕೋರ್ಸ್​ ಮಾಡಿದೆ. ಬೆಂಗಳೂರಿಗೆ ವಾಪಸ್ಸಾದ ಬಳಿಕ ಮೂರು ದಿನಕ್ಕೊಮ್ಮೆ ಪ್ರ್ಯಾಕ್ಟೀಸ್​ ಮಾಡುತ್ತಿದ್ದೇನೆ. ಕಲಿಯಲು ಕೊನೆಯಿಲ್ಲ. ನನಗೇನು ಇಷ್ಟವಾಗುತ್ತೆ, ಹೇಗೆ ಇರಬೇಕು ಅನ್ನಿಸುತ್ತೆ ಹಾಗಿರಲು ಯತ್ನಿಸುತ್ತಿದ್ದೇನೆ. ನೆಮ್ಮದಿಯೇ ಖುಷಿ. ಕಡಿಮೆ ಇದ್ದಷ್ಟೂ ಬದುಕು ಸುಂದರ' ಎಂದು ಫಿಟ್ನೆಸ್​ ಜರ್ನಿಯ ಬಗ್ಗೆ ಮಾಹಿತಿ ನೀಡುತ್ತಾರೆ.

ಕೋಶ ಓದುವುದರ ಜತೆ ದೇಶ ಸುತ್ತುತ್ತೇನೆ!

ಅಂದಹಾಗೆ ಬೈಕರ್​ ಆಗಿರುವ ಭೂಮಿ, ಸೋಲೋ ಟ್ರಿಪ್​ಗಳನ್ನು ಹೋಗುತ್ತಿರುತ್ತಾರಂತೆ. "ಒಂಬತ್ತನೇ ತರಗತಿಯಿಂದ ಬೈಕ್​ ಓಡಿಸುತ್ತಿದ್ದೇನೆ. ನಾಲ್ಕು ವರ್ಷಗಳ ಹಿಂದೆ ಬೈಕ್​ ಖರೀದಿಸಿದೆ. ದೆಹಲಿಯಿಂದ ಲಡಾಖ್​ಗೆ ಬೈಕ್​ ರೈಡ್​ ಮಾಡಿದ್ದೇನೆ. ದಣ ಭಾರತದ ಹಲವೆಡೆ ಬೈಕ್​ನಲ್ಲಿ ಸುತ್ತಿದ್ದೇನೆ. ಬೆಂಗಳೂರಿನಿಂದ ನನ್ನೂರು ಕುಂದಾಪುರಕ್ಕೆ ಬೈಕ್​ನಲ್ಲಿ ಓಡಾಡುತ್ತಿರುತ್ತೇನೆ. ನನಗೆ ಭಯವಿಲ್ಲ. ಕೆಲವೊಮ್ಮೆ ಹಿಂಜರಿಕೆಯಾದರೂ, ಅದು ನನ್ನನ್ನು ಆವರಿಸಿಕೊಳ್ಳಲು ಬಿಡುವುದಿಲ್ಲ. ಹೆಣ್ಣುಮಕ್ಕಳು ಹೀಗೇ ಇರಬೇಕು ಎಂಬ ಚೌಕಟ್ಟನ್ನು ಬಿಟ್ಟು ಯೋಚಿಸುವುದನ್ನು ಹೇಳದೇ ತೋರಿಸುತ್ತೇನೆ ಅಂತಲೂ ಕೆಲವರು ಹೇಳಿದ್ದಾರೆ' ಎಂದು ಹೇಳಿಕೊಳ್ಳುತ್ತಾರೆ ಭೂಮಿ.

ಸ್ನೇಹಕ್ಕೂ ಸಿದ್ದ, ಕುಸ್ತಿಗೂ ಬದ್ದ!

ಅಂದಹಾಗೆ ಭೂಮಿ ನಟಿಸಿರುವ ಎರಡು ಕನ್ನಡ ಚಿತ್ರಗಳು ಸದ್ಯ ತೆರೆಗೆ ಬರಲು ರೆಡಿಯಿವೆ. "ಅನ್​ಲಾಕ್​ ರಾವ' ಇದೇ ೆ. 7ರಂದು ಬಿಡುಗಡೆಯಾಗಲಿದ್ದು, ಅವರು ಕುಸ್ತಿಪಟುವಾಗಿ ನಟಿಸಿರುವ "ಕೆಂಡದ ಸೆರಗು' ರಿಲೀಸ್​ಗೆ ರೆಡಿಯಿದೆ. "ಒಂದು ತೆಲುಗು ಸಿನಿಮಾ ಮಾಡಿದ್ದೇನೆ. ಅದು ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ. ನನಗೆ ಏಕತಾನತೆಯ ಪಾತ್ರಗಳನ್ನು ಮಾಡಲು ಇಷ್ಟವಿಲ್ಲ. ವಿಭಿನ್ನ ಎನಿಸುವ ಗಟ್ಟಿ ಪಾತ್ರ ಸಿಕ್ಕರೆ ಖಂಡಿತ ನಟಿಸುತ್ತೇನೆ' ಎನ್ನುತ್ತಾರೆ ಭೂಮಿ.