ಕೊಚ್ಚಿ: ಎಮರ್ಜೆನ್ಸಿ ಇದೆ ಎಂದು ಸುಳ್ಳು ಹೇಳಿಕೊಂಡು ಯುವ ವೈದ್ಯರೊಬ್ಬರನ್ನು ತಮ್ಮ ಅಪಾರ್ಟ್ಮೆಂಟ್ಗೆ ಕರೆಸಿಕೊಂಡು, ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಲ್ಲದೇ, ವೈದ್ಯನ ಬಳಿಯಿದ್ದ 3.5 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್, ವಾಚ್ ಕದ್ದು ಪರಾರಿಯಾದ ಆರೋಪದಡಿ ಇದೀಗ ಪೊಲೀಸರು ಮಲಯಾಳಂ ನಟಿ ಸೇರಿದಂತೆ ಒಟ್ಟು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ನಟಿ ಅತುಲ್ಯ ಚಂದ್ರನ್ ಮತ್ತು ನಟ-ನಿರ್ಮಾಪಕ ಬಿಬಿನ್ ಪೆರುಂಬಿಲ್ಲಿ ಎಂದು ಹೇಳಲಾಗಿದ್ದು, ವೈದ್ಯರನ್ನು ಚಿಕಿತ್ಸೆ ಕೊಡುವ ನೆಪದಲ್ಲಿ ಮನೆಗೆ ಕರೆಸಿಕೊಂಡು, ನಂತರ ಆತನ ಮೇಲೆ ಮನದಂಬಂತೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ನಟಿ ಸೇರಿದಂತೆ ಒಟ್ಟು ಮೂವರನ್ನು ಸದ್ಯ ಅರೆಸ್ಟ್ ಮಾಡಿರುವ ಪೊಲೀಸರು, ಬಂಧಿತ ಮೂವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಒಟ್ಟು 12 ಆರೋಪಿಗಳು ಎಂದು ವಿವರಿಸಲಾಗಿದ್ದು, ಇದರಲ್ಲಿ ಅತುಲ್ಯ ಮತ್ತು ಬಿಬಿನ್ ಪ್ರಮುಖರು ಎಂದು ವೈದ್ಯರು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಬಿಎನ್‌ಎಸ್ (BNS)ನ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಅಕ್ರಮ ಬಂಧನ ಕೇಸ್ ದಾಖಲಿಸಲಾಗಿದ್ದು, ಉದ್ದೇಶಪೂರ್ವಕವಾಗಿ ಗಾಯವನ್ನು ಉಂಟುಮಾಡುವುದು, ಅಶ್ಲೀಲ ಕೃತ್ಯಗಳು ಮತ್ತು ಮಾತುಗಳು, ಕ್ರಿಮಿನಲ್ ಬೆದರಿಕೆ ಹಾಗೂ ದರೋಡೆಗೆ ಸಂಬಂಧಿಸಿದ ಆರೋಪಗಳನ್ನು ಹೊರಿಸಲಾಗಿದೆ.
ವೈದ್ಯರ ದೂರಿನ ಪ್ರಕಾರ, ಮಂಗಳವಾರ (ನ.03) ಈ ಘಟನೆ ನಡೆದಿದೆ ಎನ್ನಲಾಗಿದೆ. ನಟಿ ಅತುಲ್ಯ ಮತ್ತು ಬಿಬಿನ್ ವೈದ್ಯರಿಗೆ ಫೋನ್ ಕಾಲ್ ಮೂಲಕ ಸಂಪರ್ಕಿಸಿದ್ದಾರೆ. ತಮ್ಮ ತಾಯಿ ಮತ್ತು ತಂಗಿಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿಕೊಂಡು ಅಪಾರ್ಟ್ಮೆಂಟ್ಗೆ ಕೂಡಲೇ ಬರುವಂತೆ ತಿಳಿಸಿದ್ದಾರೆ. ಡಾಕ್ಟರ್ ಫ್ಲಾಟ್ ಒಳಗೆ ಬರುತ್ತಿದ್ದಂತೆ ನಟಿ ಸೇರಿದಂತೆ 12 ಮಂದಿ ಅಪಾರ್ಟ್‌ಮೆಂಟ್‌ನಲ್ಲಿದ್ದರು ಎಂದು ವಿವರಿಸಲಾಗಿದೆ.
ಬಿಬಿನ್ ಎಂಬ ವ್ಯಕ್ತಿ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದು, ವೈದ್ಯರಿಗೆ ಹೊಡೆದು ಕುರ್ಚಿ ಮೇಲೆ ಬಲವಂತವಾಗಿ ಕೂರಿಸಿ ಹಲ್ಲೆ ನಡೆಸಿದ್ದಾಗಿ ತಿಳಿಸಲಾಗಿದೆ. ವೈದ್ಯರ ಫೋನ್, ವಾಚ್ ಸೇರಿದಂತೆ ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಡವಂತರ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕಾಗಿಸಿದ್ದು, ಸುಮ್ಮನೆ ವೈದ್ಯರನ್ನು ಕರೆಸಿ ಹೊಡೆದು ದೋಚುವುದರ ಹಿಂದಿನ ಉದ್ದೇಶವೇನು? ಇದೊಂದು 'ಹನಿ ಟ್ರ್ಯಾಪ್' ಇರಬಹುದಾ? ಎಂದು ಶಂಕಿಸಿದ್ದಾರೆ. ಮತ್ತು ಇನ್ನೂ ಒಂಬತ್ತು ಆರೋಪಿಗಳಿಗಾಗಿ ಶೋಧವನ್ನು ತೀವ್ರಗೊಳಿಸಿದ್ದಾರೆ,(ಏಜೆನ್ಸೀಸ್).