ಸಿನಿವಾಣಿ

ರಿಪ್ಪನ್​ಸ್ವಾಮಿಗೆ ಜೋಡಿಯಾದ ಡಾ. ಮಂಗಳ ; ನಟಿ ಅಶ್ವಿನಿ ಚಂದ್ರಶೇಖರ್​ ರೀ-ಎಂಟ್ರಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಯುವ ನಿರ್ದೇಶಕ ಕಿಶೋರ್​ ಮೂಡುಬಿದ್ರೆ ಆ್ಯಕ್ಷನ್​- ಕಟ್​ ಹೇಳುತ್ತಿರುವ, ವಿಜಯ್​ ರಾಘವೇಂದ್ರ ನಾಯಕನಾಗಿರುವ ಸಿನಿಮಾ "ರಿಪ್ಪನ್​ಸ್ವಾಮಿ'. ಈಗಾಗಲೇ ವಿಭಿನ್ನ ಟೈಟಲ್​ ಮತ್ತು ಪೋಸ್ಟರ್​ ಮೂಲಕ ಗಮನ ಸೆಳೆದಿರುವ ಈ ಚಿತ್ರದ ಮೂಲಕ ನಟಿ ಅಶ್ವಿನಿ ಚಂದ್ರಶೇಖರ್​ ಸ್ಯಾಂಡಲ್​ವುಡ್​ಗೆ ಮತ್ತೆ ವಾಪಸ್ಸಾಗಿದ್ದಾರೆ. ಮೂಲತಃ ಶಿವಮೊಗ್ಗದ ಅಶ್ವಿನಿ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್​ ಪೂರ್ಣಗೊಳಿಸಿ, "ಪ್ರೇಮ ಪಲ್ಲಕ್ಕಿ' ಚಿತ್ರದ ಮೂಲಕ 2015ರಲ್ಲಿ ಸ್ಯಾಂಡಲ್​ವುಡ್​ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಬಳಿಕ "ಒಂದು ರೊಮ್ಯಾಂಟಿಕ್​ ಪ್ರೇಮಕತೆ', "ಆಕ್ಟೋಪಸ್​' ಸೇರಿ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅವರು, ಕ್ರಮೇಣ ಪರಭಾಷೆಗಳಲ್ಲಿ ಬಿಜಿಯಾದರು. ತೆಲುಗಿನಲ್ಲಿ "ಪ್ರೇಮ್​ ಕಹಾನಿ', "ಆವು ಪುಲಿ ಮಧ್ಯಲೋ ಪ್ರಭಾಸ್​ ಪೆಳ್ಳಿ', ತಮಿಳಿನಲ್ಲಿ "ಮೆರ್ಲಿನ್​'. "ಪರಂಜು ಸೆಲ್ಲವ', "ಕಾಲ್​ ಟ್ಯಾಕ್ಸಿ'. "ಜಿವಿ 2' ಸೇರಿ ಮಲಯಾಳಂನಲ್ಲೂ ನಟಿಸುತ್ತಿದ್ದಾರೆ. ಹೀಗೆ ಕಳೆದ ಏಳೆಂಟು ವರ್ಷಗಳಿಂದ ಪರಭಾಷೆಗಳಲ್ಲೇ ಬಿಜಿಯಾಗಿದ್ದ ಅಶ್ವಿನಿ, ಇದೀಗ "ರಿಪ್ಪನ್​ ಸ್ವಾಮಿ' ಮೂಲಕ ಸ್ಯಾಂಡಲ್​ವುಡ್​ಗೆ ಕಮ್​ಬ್ಯಾಕ್​ ಮಾಡಿರುವ ಸಂಭ್ರಮದಲ್ಲಿದ್ದಾರೆ.

ಅವರಿಲ್ಲಿ ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಕಿಶೋರ್​ ಮೂಡುಬಿದ್ರೆ, "ಅಶ್ವಿನಿ ಚಂದ್ರಶೇಖರ್​ ನಮ್ಮ ಚಿತ್ರದಲ್ಲಿ ವಿಜಯ್​ ರಾವೇಂದ್ರ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕನ ಪಾತ್ರಕ್ಕೆ ಎಷ್ಟು ಮಹತ್ವವಿದೆಯೋ, ನಾಯಕಿಯ ಪಾತ್ರಕ್ಕೂ ಅಷ್ಟೇ ಮಹತ್ವವಿದೆ. ಇಬ್ಬರೂ ಸರಿಸಮನಾಗಿ ಕಥೆಯನ್ನು ಮುಂದುವರಿಸುತ್ತಾರೆ' ಎಂದು ಮಾಹಿತಿ ನೀಡುತ್ತಾರೆ. ಸದ್ಯ "ರಿಪ್ಪನ್​ ಸ್ವಾಮಿ' ಸೆನ್ಸಾರ್​ ಅಂಗಳದಲ್ಲಿದ್ದು, ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ.

ಸಾಲು ಸಾಲು ಚಿತ್ರಗಳಲ್ಲಿ ಬಿಜಿ

ಕನ್ನಡದಲ್ಲಿ "ರಿಪ್ಪನ್​ಸ್ವಾಮಿ' ಸೇರಿ ತಮಿಳಿನಲ್ಲಿ "ಜಿವಿ 3' ಹಾಗೂ ಮತ್ತೊಂದು ಚಿತ್ರ ಮತ್ತು ಮಲಯಾಳಂನಲ್ಲೂ ಎರಡು ಸಿನಿಮಾಗಳಲ್ಲಿ ಅಶ್ವಿನಿ ನಟಿಸಿದ್ದು, ಸದ್ಯ ಮೂರು ಭಾಷೆಗಳ ಐದು ಚಿತ್ರಗಳು ರಿಲೀಸ್​ಗೆ ರೆಡಿಯಾಗುತ್ತಿವೆ.